ಧಾರವಾಡದ ಮಳಾಪುರದ ಹಶ್ಮಿನಗರದಲ್ಲಿ ಶುಕ್ರವಾರ ತಡರಾತ್ರಿ ಭೀಕರ ಘಟನೆಯೊಂದು ಸಂಭವಿಸಿದೆ. ರಾತ್ರೋರಾತ್ರಿ ಮನೆಗೆ ನುಗ್ಗಿದ ದುಷ್ಕರ್ಮಿಗಳು ಯೂತ್ ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿಯೊಬ್ಬರನ್ನು ಬರ್ಬರವಾಗಿ ಹತ್ಯೆ ಮಾಡಿದ್ದಾರೆ.


ಧಾರವಾಡದ ಮಾಳಾಪುರ ಹಶ್ಮಿನಗರದ ನಿವಾಸಿ ಫೈರೋಜ್ ಪಠಾಣ್ ಹತ್ಯೆಯಾದ ದುರ್ದೈವಿ. ಫೈರೋಜ್ ಅವರು ಈ ಹಿಂದೆ ಎನ್‌ಎಸ್‌ಯುಐ (NSUI) ಸಂಘಟನೆಯಲ್ಲಿ ಗುರುತಿಸಿಕೊಂಡಿದ್ದರು. ಬಳಿಕ ಯೂತ್ ಕಾಂಗ್ರೆಸ್ ಸೇರಿ ಪ್ರಧಾನ ಕಾರ್ಯದರ್ಶಿಯಾಗಿ ಸಕ್ರಿಯ ರಾಜಕಾರಣದಲ್ಲಿ ತೊಡಗಿಸಿಕೊಂಡಿದ್ದರು.
ಶುಕ್ರವಾರ ತಡರಾತ್ರಿ ಹಶ್ಮಿನಗರದಲ್ಲಿರುವ ಫೈರೋಜ್ ಅವರ ನಿವಾಸಕ್ಕೆ ನುಗ್ಗಿದ ಅಪರಿಚಿತ ದುಷ್ಕರ್ಮಿಗಳು, ಅವರ ಮೇಲೆ ಚಾಕು ಹಾಗೂ ಮಾರಕಾಸ್ತ್ರಗಳಿಂದ ಮನಸೋಇಚ್ಛೆ ದಾಳಿ ನಡೆಸಿದ್ದಾರೆ. ತೀವ್ರ ರಕ್ತಸ್ರಾವದಿಂದಾಗಿ ಫೈರೋಜ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ತಕ್ಷಣವೇ ಅವರನ್ನು ಧಾರವಾಡ ಜಿಲ್ಲಾಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಅವರು ಈಗಾಗಲೇ ಮೃತಪಟ್ಟಿದ್ದಾರೆ ಎಂದು ವೈದ್ಯರು ದೃಢಪಡಿಸಿದ್ದಾರೆ.
ಈ ಹತ್ಯೆಯ ಹಿಂದೆ ಹಳೆಯ ವೈಷಮ್ಯವಿರುವ ಶಂಕೆ ವ್ಯಕ್ತವಾಗಿದೆ. ಹತ್ಯೆ ಮಾಡಿದವರು ಸ್ಥಳೀಯರೇ ಇರಬಹುದು ಎಂದು ಸಂಶಯಿಸಲಾಗುತ್ತಿದೆ. ಘಟನಾ ಸ್ಥಳಕ್ಕೆ ಉಪನಗರ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇತ್ತ ಫೈರೋಜ್ ಅವರ ನಿವಾಸ ಹಾಗೂ ಜಿಲ್ಲಾಸ್ಪತ್ರೆಯ ಆವರಣದಲ್ಲಿ ನೂರಾರು ಬೆಂಬಲಿಗರು ಜಮಾಯಿಸಿದ್ದು, ಕುಟುಂಬಸ್ಥರ ರೋದನ ಮುಗಿಲು ಮುಟ್ಟಿತ್ತು.
