ಬೆಳಗಾವಿಯ ಜಿಲ್ಲಾ ನಗರಾಭಿವೃದ್ಧಿ ಕೋಶದ ಸಹಾಯಕ ಕಾರ್ಯಪಾಲಕ ಅಭಿಯಂತರರೊಬ್ಬರ ಮೇಲೆ ಇಂದು ಲೋಕಾಯುಕ್ತ ಪೊಲೀಸರು ಸಿಡಿಲಬ್ಬರದ ದಾಳಿ ನಡೆಸಿದ್ದಾರೆ. ಅಕ್ರಮ ಆಸ್ತಿ ಗಳಿಕೆಯ ದೂರಿನ ಹಿನ್ನೆಲೆಯಲ್ಲಿ ನಡೆದ ಈ ಸರ್ಜಿಕಲ್ ಸ್ಟ್ರೈಕ್‌ನಲ್ಲಿ ಕುಬೇರನನ್ನೇ ನಾಚಿಸುವಂತಹ ಸಂಪತ್ತು ಬಯಲಾಗಿದೆ.

ಬೆಳಗಾವಿ ಜಿಲ್ಲಾಧಿಕಾರಿಗಳ ಕಚೇರಿಯ ನಗರಾಭಿವೃದ್ಧಿ ಕೋಶದ ಎಇಇ ಅಜಯಸಿಂಗ ಬಾಪಸಿಂಗ ರಜಪೂತ ಅವರಿಗೆ ಸೇರಿದ ಒಟ್ಟು 7 ಸ್ಥಳಗಳ ಮೇಲೆ ಲೋಕಾಯುಕ್ತ ಪೊಲೀಸರು ಏಕಕಾಲಕ್ಕೆ ದಾಳಿ ನಡೆಸಿದ್ದಾರೆ. ಬೆಳಗಾವಿ ನಗರದ ಮೂರು ಮನೆಗಳು, ಕಚೇರಿ ಹಾಗೂ ಬ್ಯಾಂಕ್ ಲಾಕರ್‌ಗಳನ್ನು ತಪಾಸಣೆ ನಡೆಸಿದ ಅಧಿಕಾರಿಗಳು, ಅಧಿಕಾರಿಯ ಅಕ್ರಮ ಸಾಮ್ರಾಜ್ಯವನ್ನು ಕಂಡು ಬೆರಗಾಗಿದ್ದಾರೆ. ಪ್ರಾಥಮಿಕ ತನಿಖೆಯಲ್ಲಿ ಸವದತ್ತಿ, ಹುಕ್ಕೇರಿ ಮತ್ತು ಹುಬ್ಬಳ್ಳಿ ಸೇರಿದಂತೆ ವಿವಿಧೆಡೆ ಒಟ್ಟು 18 ನಿವೇಶನಗಳು ಪತ್ತೆಯಾಗಿವೆ. ಅಲ್ಲದೆ, ಸುಮಾರು 5 ಕೆಜಿ 960 ಗ್ರಾಂ ಚಿನ್ನ ಹಾಗೂ ವಜ್ರದ ಆಭರಣಗಳು ಮತ್ತು 5 ಕೆಜಿ ಬೆಳ್ಳಿಯ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಇವುಗಳ ಮೌಲ್ಯ ಕೋಟ್ಯಂತರ ರೂಪಾಯಿಗಳಾಗಲಿದೆ. ಇಷ್ಟೇ ಅಲ್ಲದೆ, ಆರೋಪಿ ಅಧಿಕಾರಿಯ ಹೆಸರಿನಲ್ಲಿದ್ದ 3 ಕೋಟಿ 12 ಲಕ್ಷ ರೂಪಾಯಿ ಮೌಲ್ಯದ ಬ್ಯಾಂಕ್ ಫಿಕ್ಸೆಡ್ ಡಿಪಾಸಿಟ್ (FD), ಐಷಾರಾಮಿ ಕಾರು ಮತ್ತು ಬೈಕ್‌ಗಳನ್ನು
ಅಧಿಕಾರಿಗಳು ಜಪ್ತಿ ಮಾಡಿದ್ದಾರೆ. ಒಟ್ಟಾರೆಯಾಗಿ 14 ಕೋಟಿ ರೂಪಾಯಿಗಿಂತಲೂ ಹೆಚ್ಚಿನ ಮೌಲ್ಯದ ಸ್ಥಿರ ಮತ್ತು ಚರಾಸ್ತಿ ಪತ್ತೆಯಾಗಿದ್ದು, ಆದಾಯಕ್ಕಿಂತ ಹೆಚ್ಚಿನ ಆಸ್ತಿ ಹೊಂದಿರುವ ಹಿನ್ನೆಲೆಯಲ್ಲಿ ಭ್ರಷ್ಟಾಚಾರ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಸದ್ಯ ಬೆಳಗಾವಿ ಲೋಕಾಯುಕ್ತ ಎಸ್ಪಿ ಮಾರ್ಗದರ್ಶನದಲ್ಲಿ ತನಿಖೆ ಮುಂದುವರೆದಿದ್ದು, ಲಾಕರ್ ತೆರೆದಂತೆ ಮತ್ತಷ್ಟು ಅಕ್ರಮ ಸಂಪತ್ತು ಹೊರಬರುವ ಸಾಧ್ಯತೆಯಿದೆ ಎಂದು ಅಧಿಕಾರಿಗಳ ಪ್ರಕಟಣೆ ತಿಳಿಸಿದೆ.
