ವೇದಾಂತ ಕೇಸರಿ ಮಲ್ಲಿಕಾರ್ಜುನ ಸ್ವಾಮೀಜಿ ಹಾಗೂ ನಡೆದಾಡುವ ದೇವರು ಸಿದ್ದೇಶ್ವರ ಸ್ವಾಮೀಜಿ ಅವರ ಆಶೀರ್ವಾದ ಮತ್ತು ಪ್ರೇರಣೆಯಿಂದ ಜೀವನದಲ್ಲಿ ಸಾಧನೆ ಸಾಧ್ಯವಾಗಿದೆ. ಸಮಾಜದ ಉನ್ನತ ಶಿಕ್ಷಣ ಪಡೆದ ಯುವಕರು ಮಾತೃ–ಪಿತೃ ಭಾವವನ್ನು ಅಳವಡಿಸಿಕೊಳ್ಳಬೇಕು. ತಾಯಿ-ತಂದೆಯರು ಮಕ್ಕಳ ಮೊದಲ ಗುರುಗಳಾಗಿದ್ದು, ಅವರ ತ್ಯಾಗ ಮತ್ತು ಮೌಲ್ಯಗಳನ್ನು ಗೌರವಿಸುವುದು ಭಾರತೀಯ ಸಂಸ್ಕೃತಿಯ ಮೂಲ ತತ್ವವಾಗಿದೆ ಎಂದು ಡಾ. ಪ್ರಭಾಕರ್ ಕೋರೆ ಉಗಾರದಲ್ಲಿ ಹೇಳಿದರು.


ಪ್ರಧಾನಿ ನರೇಂದ್ರ ಮೋದಿ ಅವರು ಶ್ರೀ ಸಿದ್ದೇಶ್ವರ ಸ್ವಾಮೀಜಿಗೆ ಪದ್ಮಶ್ರೀ ಪ್ರಶಸ್ತಿ ಘೋಷಿಸಿ, ಸ್ವತಃ ಕರೆ ಮಾಡಿ ಸ್ವೀಕರಿಸಲು ಆಹ್ವಾನಿಸಿದ್ದರೂ, “ನಾನು ಅದಕ್ಕೆ ಪಾತ್ರನಲ್ಲ” ಎಂದು ವಿನಯದಿಂದ ನಿರಾಕರಿಸಿದ ಘಟನೆ ಅವರ ಮಹತ್ವವನ್ನು ತೋರಿಸುತ್ತದೆ ಎಂದು ಅವರು ಹೇಳಿದರು.

ಉಗಾರದ ಶ್ರೀ ಮಲ್ಲಿಕಾರ್ಜುನ ಗುರುದೇವ ಆಶ್ರಮದಲ್ಲಿ ವಾರ್ಷಿಕೋತ್ಸವ ನಿಮಿತ್ತ ಕಳೆದ ಮೂರು ದಿನಗಳಿಂದ ಸತ್ಸಂಗ ಕಾರ್ಯಕ್ರಮಗಳು ನಡೆಯುತ್ತಿದ್ದು, ಬುಧವಾರ ‘ಮಾತೃ-ಪಿತೃ ಭಕ್ತಿ ಸೇವೆ’ ವಿಷಯವಾಗಿ ಆಶೀರ್ವಚನ ನೀಡಲಾಯಿತು.
ಪರಮಪೂಜ್ಯ ಈಶ್ವರ ಸ್ವಾಮೀಜಿ ತಮ್ಮ ಪ್ರವಚನದಲ್ಲಿ, ತಾಯಿ-ತಂದೆಯರು ಮಕ್ಕಳಿಗಾಗಿ ಮಾಡುವ ಶ್ರಮ ಅಪಾರವಾಗಿದ್ದು, ಶಿಕ್ಷಣದ ಜೊತೆಗೆ ಸಂಸ್ಕಾರವೂ ಅಗತ್ಯವಾಗಿದೆ. ಹಿರಿಯರಿಗೆ ಗೌರವ, ಕೃತಜ್ಞತೆ ಹಾಗೂ ಜವಾಬ್ದಾರಿತನ ಬೆಳೆಸಿಕೊಳ್ಳಬೇಕು. ತಾಯಿ-ತಂದೆಯ ಆಶೀರ್ವಾದವೇ ಜೀವನದಲ್ಲಿ ಯಶಸ್ಸಿನ ದಾರಿಯಾಗಿದೆ ಎಂದು ಹೇಳಿದರು. ಪ್ರವಚನದ ವೇಳೆ ನೈಜ ಘಟನೆಗಳನ್ನು ವಿವರಿಸಿದಾಗ ಭಕ್ತರು ಭಾವುಕರಾದರು.
ಮಲ್ಲಿಕಾರ್ಜುನ ಆಶ್ರಮದ ಅಧ್ಯಕ್ಷ ಬಸವಲಿಂಗ ಸ್ವಾಮೀಜಿ ಮಾತನಾಡಿ, ಮಲ್ಲಿಕಾರ್ಜುನ ಸ್ವಾಮೀಜಿ ಹಾಗೂ ಸಿದ್ದೇಶ್ವರ ಸ್ವಾಮೀಜಿ ಅವರ ಪ್ರೇರಣೆಯಿಂದ ಆಶ್ರಮವನ್ನು ಸ್ಥಾಪಿಸಲಾಗಿದ್ದು, ಕಳೆದ ೨೫ ವರ್ಷಗಳಿಂದ ಗುರುಕುಲ ಮಾದರಿಯಲ್ಲಿ ಸಂಸ್ಕಾರಯುತ ಶಿಕ್ಷಣ ನೀಡಲಾಗುತ್ತಿದೆ. ವಿದ್ಯಾರ್ಥಿಗಳಿಗೆ ಪಠ್ಯಜ್ಞಾನ ಮಾತ್ರವಲ್ಲದೆ ಮೌಲ್ಯಾಧಾರಿತ ಶಿಕ್ಷಣ ನೀಡಲಾಗುತ್ತಿದೆ ಎಂದು ಹೇಳಿದರು. ಆಶ್ರಮದ ವಿದ್ಯಾರ್ಥಿಗಳಿಂದ ಪೋಷಕರ ಪಾದಪೂಜೆ ಕಾರ್ಯಕ್ರಮ ನಡೆಸಿ, ಮಕ್ಕಳಲ್ಲಿ ತಾಯಿ-ತಂದೆಯರ ಬಗ್ಗೆ ಗೌರವ ಬೆಳೆಸುವ ಉದ್ದೇಶವಿದೆ ಎಂದು ತಿಳಿಸಿದರು.
ಸತ್ಸಂಗ ಕಾರ್ಯಕ್ರಮದಲ್ಲಿ ಭಕ್ತಿಯೋಗಾಶ್ರಮ ಹಂಚಿನಾಳದ ಪೂಜ್ಯ ಶ್ರೀ ಮಹೇಶಾನಂದ ಸ್ವಾಮಿಗಳು, ಪೂಜ್ಯ ಶ್ರೀ ಸಂಗಮೇಶ್ವರ ಮಹಾಸ್ವಾಮಿಗಳು, ಶ್ರೀ ಸಿದ್ದೇಶ್ವರ ಗುರುದೇವಾಶ್ರಮದ ಸಾಲೋಟಗಿ, ಚಿಕ್ಕಾಲಗುಂಡಿಯ ಮಲ್ಲಿಕಾರ್ಜುನ ಮಠದ ಪೂಜ್ಯ ಶ್ರೀ ಶರಣಾನಂದ ಸ್ವಾಮೀಜಿಗಳು ಉಪಸ್ಥಿತರಿದ್ದರು.
ಗುರುದೇವ ವಿದ್ಯಾಲಯದ ವಿದ್ಯಾರ್ಥಿಗಳಿಂದ ಪೋಷಕರ ಪಾದಪೂಜೆ ಕಾರ್ಯಕ್ರಮ ವಿಶೇಷ ಗಮನ ಸೆಳೆದಿತು. ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡಿದಾಗ ಮಾತ್ರ ಅವರ ಜೀವನದಲ್ಲಿ ಯಶಸ್ಸು ಸಾಧ್ಯವೆಂದು ಪಾಲ್ಗೊಂಡವರು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಸಾಹಿತ್ಯ ಪ್ರತಿಷ್ಠಾನ ಕಾಗವಾಡ ತಾಲೂಕು ಅಧ್ಯಕ್ಷ ಡಾ. ಶಿವಗೌಡ ಕಾಗೆ, ಚಿಕ್ಕೋಡಿ ಸಕ್ಕರೆ ಕಾರ್ಖಾನೆಯ ನಿರ್ದೇಶಕ ಅನ್ನಾಸಾಹೇಬ್ ಪಾಟೀಲ ಸೇರಿದಂತೆ ಅನೇಕ ಗಣ್ಯರು ಹಾಗೂ ಭಕ್ತರು ಪಾಲ್ಗೊಂಡಿದ್ದರು. ದಾಸೋಹ ಸೇವೆಯನ್ನು ಪ್ರಕಾಶ ಅ. ರಾಜಮಾನೆ ನೆರವೇರಿಸಿದರು.
