BELAGAVI

ನಗರಸೇವಕರ ಸಮಸ್ಯೆಗಳನ್ನು ಕೂಡಲೇ ಪರಿಹರಿಸಿ; ಅಧಿಕಾರಿಗಳಿಗೆ ಮಹಾಪೌರ ಪ್ರೀತಿ ಕಾಮಕರ್ ಸೂಚನೆ…

Share

ನಗರಸೇವಕರು ಹೇಳಿದ ಸಮಸ್ಯೆಗಳನ್ನು ಕೂಡಲೇ ಪರಿಹರಿಸಬೇಕೆಂದು ಅಧಿಕಾರಿಗಳಿಗೆ ಮಹಾಪೌರ ಪ್ರೀತಿ ಕಾಮಕರ್ ಅವರು ಸೂಚನೆ ನೀಡಿದರು.

ಇಂದು ಬೆಳಗಾವಿ ಮಹಾನಗರ ಪಾಲಿಕೆಯ ಪರಿಷತ್ ಸಭಾಗೃಹದಲ್ಲಿ ಮಹಾಪೌರ ಪ್ರೀತಿ ಕಾಮಕರ್ ಅವರ ಅಧ್ಯಕ್ಷತೆಯಲ್ಲಿ ಆಡಳಿತಾತ್ಮಕ ಸಭೆಯನ್ನು ಕರೆಯಲಾಗಿತ್ತು.

ನಗರಸೇವಕಿ ರೇಷ್ಮಾ ಭೈರಕದಾರ್ ಅವರು ತಮ್ಮ ವಾರ್ಡಿನಲ್ಲಿ ಮಳೆಗಾಲದಲ್ಲಿ ಉಂಟಾಗುತ್ತಿರುವ ಒಳಚರಂಡಿ ಸಮಸ್ಯೆಯನ್ನು ಪರಿಷತ್ ಸಭೆಯಲ್ಲಿ ಮಂಡಿಸಿದರೂ, ಇಲ್ಲಿಯ ವರೆಗೂ ಅಧಿಕಾರಿಗಳು ಕ್ರಮಕೈಗೊಂಡಿಲ್ಲವೆಂದು ಅಸಮಾಧಾನ ವ್ಯಕ್ತಪಡಿಸಿದರು. ರಸ್ತೆಯ ಮೇಲೆ ಕೊಳಚೆ ನೀರು ಹರಿದು ನಡೆದಾಡಲೂ ತೊಂದರೆಯಾಗುತ್ತಿದೆ. ಅಲ್ಲದೇ ಮನ್ನತ್ ಕಾಲನಿಯಲ್ಲಿ ಮಳೆ ನೀರು ಮನೆಗೆ ನುಗ್ಗುತ್ತಿದೆ ಎಂದು ನಗರ ಸೇವಕ ರಿಯಾಜ್ ಕಿಲ್ಲೆದಾರ ಹೇಳಿದರು. ಇದಕ್ಕೆ ಮಹಾಪೌರ ಪ್ರೀತಿ ಕಾಮಕರ್ ಅವರು ನಗರಸೇವಕರೊಟ್ಟಿಗೆ ತೆರಳಿ ಸಮಸ್ಯೆಯನ್ನು ಪರಿಹರಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು.

ನಾಮನಿರ್ದೇಶಿತ ಸದಸ್ಯ ದಿನೇಶ್ ನಾಶಿಪುಡಿ ಅವರು ರಾಷ್ಟ್ರೀಯ ಹೆದ್ದಾರಿಯ ಬಳಿ ಬಿದ್ದ ತೆಗ್ಗು ಗುಂಡಿಗಳನ್ನು ಮುಚ್ಚುವುದು ಪ್ರಾಧಿಕಾರಣದ ಕೆಲಸ ಆದರೇ, ಮಹಾನಗರ ಪಾಲಿಕೆ ಕಾಮಗಾರಿಯ ಜವಾಬ್ದಾರಿ ಹೊತ್ತರೂ ಅಧಿಕಾರಿಗಳು ಮುತುವರ್ಜಿ ವಹಿಸುತ್ತಿಲ್ಲವೆಂದು ಬೇಸರ ವ್ಯಕ್ತಪಡಿಸಿದರು.

ನಗರಸೇವಕ ಜಯತೀರ್ಥ ಸವದತ್ತಿ ಅವರು ತಮ್ಮ ಕ್ಷೇತ್ರದಲ್ಲಿ ಎಲ್.ಆಂಡ್ ಟಿ ಕಂಪನಿ ಅವರು ಕಾಮಗಾರಿ ಮಾಡುವ ವೇಳೆ ಸಿಡಿ ವರ್ಕಗೆ ಧಕ್ಕೆಯಾಗಿದ್ದು, ಮಳೆ ನೀರು ಅಂಗಡಿಗಳಲ್ಲಿ ನುಗ್ಗುತ್ತಿದೆ. ಕಲ್ಮಠ ರಸ್ತೆ ಮೂಲಕ ಮಾರುಕಟ್ಟೆಗೆ ನೀರು ನುಗ್ಗಿ ಅಂಗಡಿಗಳಲ್ಲಿನ ವಸ್ತುಗಳು ಹಾಳಾಗಿವೆ. ಇದಕ್ಕೆ ಜವಾಬ್ದಾರರು ಯಾರೂ ಎಂದು ಪ್ರಶ್ನಿಸಿದರು.

ಸ್ಥಾಯಿ ಸಮಿತಿ ಅಧ್ಯಕ್ಷ ಲಕ್ಷ್ಮೀ ರಾಠೋಡ್ ಅವರು ಜನರಿಂದ ದೂರುಗಳು ಹೆಚ್ಚಾಗಿ ಬರುತ್ತಿದ್ದು, ರಸ್ತೆ ಮತ್ತು ಡ್ರೈನೇಜ್’ಗಳನ್ನು ಸರಿಯಾಗಿ ನಿರ್ವಹಿಸಿ, ಜನಹಿತದಲ್ಲಿ ಕಾಮಗಾರಿಯನ್ನು ಕೈಗೆತ್ತಿಕೊಳ್ಳಬೇಕೆಂದರು.

ಇನ್ನು ನಗರಸೇವಕಿ ರೇಷ್ಮಾ ಭೈರಕದಾರ ಅವರು 2016 ರಲ್ಲಿ ಭೂಗತ ಕೇಬಲ್’ಗಳನ್ನು ಅಳವಡಿಸಿ ಬಾಕ್ಸ್’ಗಳನ್ನು ಅಳವಡಿಸಲಾಗಿದೆ. ಆದರೇ, ಅವುಗಳಿಗೆ 10 ವರ್ಷಗಳಾದರೂ ಸಂಪರ್ಕ ನೀಡದ ಹಿನ್ನೆಲೆ ಅಸಮಾಧಾನ ವ್ಯಕ್ತಪಡಿಸಿದರು. ಶೇ. 80 ರಷ್ಟು ಕಾಮಗಾರಿ ಆಗಿದ್ದು, ಶೇ. 20 ರಷ್ಟು ಬಾಕಿಯುಳಿದ ಕಾಮಗಾರಿಯನ್ನು ಪೂರ್ಣಗೊಳಿಸಬೇಕೆಂದರು. ಇದಕ್ಕೆ ಸಮರ್ಪಕ ಉತ್ತರ ಸಿಗದಿದ್ದಾಗ ಸದಸ್ಯ ರವಿ ಧೋತ್ರೆ, ಸಂದೀಪ್ ಜಿರಗ್ಯಾಳ ಅವರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಇನ್ನು ನಗರಸೇವಕಿ ವೀಣಾ ವಿಜಾಪೂರೆ ಅವರು ವಿದ್ಯುತ್ ಸಮಸ್ಯೆ ಎದುರಾದಾಗ ಸರಿಯಾದ ಸ್ಪಂದನೆ ಸಿಗುವುದಿಲ್ಲ. ದೂರು ನೀಡುವ ಸಹಾಯವಾಣಿ ಕಾರ್ಯಾನ್ವಿತವಾಗಿರುವುದಿಲ್ಲ ಎಂದರು. ಇದಕ್ಕೆ ನಗರಸೇವಕ ರಾಜಶೇಖರ್ ಢೋಣಿ ಅವರು ಕೂಡ ಧ್ವನಿಗೂಡಿಸಿದರು. ಇದಕ್ಕೆ ಸಹಾಯವಾಣಿಯಲ್ಲಿ ದೂರು ನೀಡಲು ಅಧಿಕಾರಿಗಳು ಹೇಳಿದಾಗ, ಸಹಾಯವಾಣಿಯೇ ಬಂದ್ ಆಗಿರುತ್ತದೆ. ಅಧಿಕಾರಿಗಳು ಸರಿಯಾದ ಸ್ಪಂದನೆ ದೊರೆಯಲ್ಲ. ಜನರಿಗೆ ಏನು ಉತ್ತರ ನೀಡಬೇಕೆಂದು ಕೇಳಿದರು.

Tags:

error: Content is protected !!