ಬಾಗಲಕೋಟೆ ಮತ್ತು ದಾವಣಗೆರೆ ಎರಡೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲುವು ಸಾಧಿಸುವುದು ನಿಶ್ಚಿತ ಎಂದು ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ವಿಶ್ವಾಸ ವ್ಯಕ್ತಪಡಿಸಿದರು. ಬಾಗಲಕೋಟೆ ಹಾಗೂ ದಾವಣಗೆರೆ ಉಪ ಚುನಾವಣೆಗೆ ನಾಳೆ ಮತದಾನ ನಡೆಯಲಿದ್ದು, ಈ ಹಿನ್ನೆಲೆ ವಿಜಯಪುರದಲ್ಲಿ ಸಚಿವ ಎಂ.ಬಿ. ಪಾಟೀಲ್ ಪ್ರತಿಕ್ರಿಯೆ ನೀಡಿದರು. ಗ್ಯಾರಂಟಿ ಯೋಜನೆಗಳಿಂದ ವಿಶೇಷವಾಗಿ ಮಹಿಳೆಯರು ಬೆಂಬಲ ನೀಡಿದರೆ, 10 ರಿಂದ 15 ಸಾವಿರ ಮತಗಳ ಅಂತರದಿಂದ ಗೆಲ್ಲುತ್ತೇವೆ. ಒಟ್ಟಾರೆ 25 ಸಾವಿರ ಮತಗಳ ಅಂತರದಿಂದ ಜಯ ಸಾಧಿಸುವುದು ಖಚಿತ” ಎಂದರು. ಇದೇ ವೇಳೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ವಿರುದ್ಧ ವಾಗ್ದಾಳಿ ನಡೆಸಿದ ಅವರು, “ಈ ಚುನಾವಣೆ ಬಳಿಕ ವಿಜಯೇಂದ್ರರ ನ್ನು ಪಕ್ಷದ ಅಧ್ಯಕ್ಷ ಸ್ಥಾನದಿಂದ ತೆಗೆದುಹಾಕಲಾಗುತ್ತದೆ. ಅವರ ರಾಜಕೀಯ ಭವಿಷ್ಯ ಸಂಕಷ್ಟದಲ್ಲಿದೆ” ಎಂದು ಟೀಕಿಸಿದರು.

ಬಿಜೆಪಿ ಎಐ ಮೂಲಕ ವಿಡಿಯೋ ಸೃಷ್ಟಿಸಿ ಕಾಂಗ್ರೆಸ್ ವಿರುದ್ಧ ಹಣ ಹಂಚಿಕೆ ಆರೋಪ ಮಾಡುತ್ತಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಪಾಟೀಲ್, ಇಂತಹ ಕಾರ್ಯಗಳು ವಿಜಯೇಂದ್ರಗೆ ಹೊಸದಲ್ಲ. ಈ ರೀತಿಯ ಕ್ರಮಗಳು ಹಿಂದೆಯೂ ನಡೆದಿವೆ” ಎಂದು ಆರೋಪಿಸಿದರು. ಹಿಂದಿನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ವಿಜಯೇಂದ್ರ ವಿರುದ್ಧ ಹೊರಬಂದಿದ್ದ ಆರೋಪಗಳ ಕುರಿತು, ಅದಕ್ಕೆ ಸಂಬಂಧಿಸಿದ ಸ್ಪಷ್ಟೀಕರಣವನ್ನು ಅವರಿಂದಲೇ ಕೇಳಬೇಕು” ಎಂದು ಹೇಳಿದರು.
ಇದಲ್ಲದೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಕುರಿತು ಮಾತನಾಡಿದ ಅವರು, “ಯತ್ನಾಳ್ ಅವರನ್ನು ಪ್ರಚಾರಕ್ಕೆ ಕರೆದುಕೊಂಡು ಹೋಗುತ್ತಿರುವುದು ಬಿಜೆಪಿ ಪರಿಸ್ಥಿತಿಯನ್ನು ತೋರಿಸುತ್ತದೆ. ಯತ್ನಾಳ್ ಪ್ರಚಾರ ಮಾಡಿದರೂ ಗೆಲುವು ಸಾಧ್ಯವಿಲ್ಲ. ಯತ್ನಾಳ್ ಮತ್ತು ವಿಜಯೇಂದ್ರ ರಾಜಕೀಯ ಕೆರಿಯರ್ ಡಮಾರ ಆಗಲಿದೆ ಎಂದು ಕಿಡಿಕಾರಿದರು. ಒಟ್ಟಿನಲ್ಲಿ, ಉಪ ಚುನಾವಣೆಯ ಫಲಿತಾಂಶ ಕಾಂಗ್ರೆಸ್ ಪರವಾಗಿಯೇ ಬರಲಿದೆ ಎಂಬ ವಿಶ್ವಾಸವನ್ನು ಸಚಿವ ಎಂ.ಬಿ. ಪಾಟೀಲ್ ವ್ಯಕ್ತಪಡಿಸಿದರು.
