ಬೆಳಗಾವಿಯ ಚವ್ಹಾಟ್ ಗಲ್ಲಿಯಲ್ಲಿ ಕುಡಿಯುವ ನೀರಿಗಾಗಿ ಹಾಹಾಕಾರ ಉಂಟಾಗಿದ್ದು, ಎಷ್ಟೇ ಬಾರಿ ಮನವಿ ಮಾಡಿದರೂ ಕ್ಯಾರೆ ಎನ್ನದ ಸಂಬಂಧಿಸಿದ ಇಲಾಖೆಯ ವಿರುದ್ಧ ಮಹಿಳೆಯರು ಇಂದು ರಸ್ತೆ ತಡೆದು ಉಗ್ರ ಪ್ರತಿಭಟನೆ ನಡೆಸಿದ್ದಾರೆ. ಸಮಸ್ಯೆ ಪರಿಹರಿಸರಿದ್ದರೇ, ಜಿಲ್ಲಾಧಿಕಾರಿಗಳ ಕಾರ್ಯಾಲಯಕ್ಕೆ ತೆರಳಿ ಸಂಬಂಧಿಸಿದ ಇಲಾಖೆಯ ವಿರುದ್ಧ ಪ್ರತಿಭಟಿಸುವ ಎಚ್ಚರಿಕೆಯನ್ನು ನೀಡಿದ್ದಾರೆ.


ಬೆಳಗಾವಿ ಚವ್ಹಾಟಗಲ್ಲಿಯಲ್ಲಿ ನೀರಿಗಾಗಿ ಹಾಹಾಕಾರ ಉಂಟಾಗಿದ್ದು, ಖಾಲಿ ಕೊಡಗಳನ್ನು ಹಿಡಿದು ರಸ್ತೆಯನ್ನು ಬಂದ್ ಮಾಡಿ ಇಂದು ಮಹಿಳೆಯರು ಪ್ರತಿಭಟಿಸಿದ ಘಟನೆ ನಡೆಯಿತು.

ಚವ್ಹಾಟ್ ಗಲ್ಲಿಯಲ್ಲಿ ನೀರಿನ ಪೈಪಲೈನ್ ಕಾಮಗಾರಿ ಸರಿಯಾಗಿ ಆಗಿಲ್ಲ. ಕೆಲ ನಳಗಳಿಗೆ ನೀರೇ ಬರಲ್ಲ. ಇನ್ನು ಕಳೆದ 8 ದಿನಗಳಿಂದ ನೀರು ಕೂಡ ಬಿಟ್ಟಿಲ್ಲ. ಕುಡಿಯುವ ನೀರಿನಲ್ಲಿ ಡ್ರೈನೇಜ್ ನೀರು ಮಿಶ್ರಣವಾಗುತ್ತಿದೆ. ಅವರು ನಮ್ಮ ಸಮಸ್ಯೆ ಕೇಳಲು ಬರದಿದ್ದರೇ, ನಾವೇ ಅವರ ಬಳಿ ಪ್ರತಿಭಟನೆಯೊಂದಿಗೆ ಸಮಸ್ಯೆಯನ್ನು ತೆಗೆದುಕೊಂಡು ಹೋಗುತ್ತೇವೆ. ಕಳೆದ 2 ತಿಂಗಳಿನಿಂದ ಈ ಸಮಸ್ಯೆ ಆಗುತ್ತಿದೆ. ಕುಡಿಯುವ ನೀರಿನಲ್ಲಿ ಕೀಟಗಳು ಪತ್ತೆಯಾಗುತ್ತಿವೆ. ಹಲವಾರು ಬಾರಿ ಕರೆ ಮಾಡಿದರೂ ಯಾವುದೇ ಪ್ರಯೋಜನವಾಗುತ್ತಿಲ್ಲ. ನಮ್ಮ ಪ್ರದೇಶಕ್ಕೆ ಕಾಲಿಟ್ಟರೇ ತಕ್ಕ ಶಾಸ್ತಿ ಮಾಡುತ್ತೇವೆ ಎಂದು ಮಹಿಳೆಯರು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು.
4 ದಿನಕ್ಕೊಮ್ಮೆ ನೀರು ಪೂರೈಸುವ ಬದಲೂ 7-8 ದಿನವಾದರೂ ಬರುತ್ತಿಲ್ಲ. 24 ಗಂಟೆಗಾಗಿ ರಸ್ತೆಯನ್ನು ಅಗೆದು ಪೈಪಲೈನ್ ಅಳವಡಿಸಲಾಗಿದೆ. ಆದರೇ, ಸರಿಯಾಗಿ ನಿರ್ವಹಣೆಯಿಲ್ಲ. ಕಲುಷಿತ ನೀರು ಕುಡಿಯುವ ನೀರಿನ್ನು ಸೇರುತ್ತಿದೆ. ಇದು ರೋಗಗಳ ಭೀತಿಯನ್ನು ಹೆಚ್ಚಿಸಿದೆ. ಮಕ್ಕಳು ಮತ್ತು ವಯೋವೃದ್ಧರಿಗೆ ಅನಾರೋಗ್ಯ ಕಾಡುತ್ತಿದೆ. ಇದಕ್ಕೆ ಜನಪ್ರತಿನಿಧಿಗಳು ಜವಾಬ್ದಾರರೇ ಅಥವಾ ಅಧಿಕಾರಿಗಳು? ನೀರಿನ ಕರ ಪಡೆಯಲೂ ಸಮಯಕ್ಕೆ ಸರಿಯಾಗಿ ಸಂಬಂಧಿಸಿದ ಇಲಾಖೆಯ ವಾಹನ ಬರುತ್ತದೆ. ಆದರೇ ನೀರಿನ ಸಮಸ್ಯೆ ಮಾತ್ರ ಪರಿಹರಿಸಲ್ಲ. ನಮ್ಮ ಗಲ್ಲಿ ಅನಾಥವಾಗಿದೆ. ಪ್ರತಿ ವರ್ಷ ಹತ್ತಾರೂ ಕೋಟಿ ರೂಪಾಯಿ ಅನುದಾನ ಬಂದರೂ ಮೂಲಭೂತ ಸೌಕರ್ಯಗಳ ಅಭಿವೃದ್ಧಿಯಾಗುತ್ತಿಲ್ಲ. ಮಂಜೂರಾದ ಅನುದಾನ ಏನಾಯಿತು? ಪಾಲಿಕೆ ಆಯುಕ್ತರು ಇದಕ್ಕೆ ಉತ್ತರ ನೀಡಬೇಕು ಇಲ್ಲದ್ದಿದರೇ ನಾವು ಜಿಲ್ಲಾಧಿಕಾರಿಗಳಿಗೆ ದೂರು ಸಲ್ಲಿಸುತ್ತೇವೆ. ಕೇವಲ ಮಾತುಗಳು ಆಶ್ವಾಸನೆಗಳು ಬೇಡ ನಮಗೆ ನ್ಯಾಯ ಬೇಕು. ಮೊದಲಿನ ವ್ಯವಸ್ಥೆ ಸರಿಯಾಗಿತ್ತು. ಈಗ ನೀರಿನ ನಿರ್ವಹಣೆ ಸರಿಯಾಗಿ ಆಗುತ್ತಿಲ್ಲ ಎಂದು ಮಹಿಳೆಯರು ಆಕ್ರೋಶ ವ್ಯಕ್ತಪಡಿಸಿದರು.
