Athani

ಸವದಿ ಅವರನ್ನು ಯಾವುದೇ ಕಾರಣಕ್ಕೂ ಪಕ್ಷಕ್ಕೆ ಸೇರಿಸಿಕೊಳ್ಳುವುದಿಲ್ಲ;ರಮೇಶ್ ಜಾರಕಿಹೊಳಿ

Share

ಅಥಣಿ ರಾಜಕೀಯದಲ್ಲಿ ಮತ್ತೊಮ್ಮೆ ವಾಕ್ಸಮರ ಶುರುವಾಗಿದೆ. ಶಾಸಕ ಲಕ್ಷ್ಮಣ ಸವದಿ ಬಿಜೆಪಿಗೆ ಮರಳುತ್ತಾರೆ ಎಂಬ ವದಂತಿಗಳ ಬೆನ್ನಲ್ಲೇ, ಸಾಹುಕಾರ್ ರಮೇಶ್ ಜಾರಕಿಹೊಳಿ ಕಿಡಿಕಾರಿದ್ದಾರೆ. ಸವದಿ ಅವರನ್ನು ಯಾವುದೇ ಕಾರಣಕ್ಕೂ ಪಕ್ಷಕ್ಕೆ ಸೇರಿಸಿಕೊಳ್ಳುವುದಿಲ್ಲ ಎಂಬ ಖಡಕ್ ಸಂದೇಶ ರವಾನಿಸಿದ್ದಾರೆ.

ಮಂಗಳವಾರ ಅಥಣಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಗೋಕಾಕ್ ಶಾಸಕ ರಮೇಶ್ ಜಾರಕಿಹೊಳಿ, ಲಕ್ಷ್ಮಣ ಸವದಿ ಅವರು ಮತ್ತೆ ಬಿಜೆಪಿ ಸೇರ್ಪಡೆಯಾಗುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದರು. “ಅವರು ಪಕ್ಷ ಬಿಡುವಾಗ ನಮ್ಮ ನಾಯಕರ ವಿರುದ್ಧ ಏನೆಲ್ಲಾ ಮಾತನಾಡಿದ್ದಾರೆ ಎಂಬುದನ್ನು ಎಲ್ ಇಡಿ (LED) ಟಿವಿಯಲ್ಲಿ ಸ್ಕ್ರೀನ್ ಹಚ್ಚಿ ತೋರಿಸುತ್ತೇವೆ” ಎಂದು ಸವಾಲು ಹಾಕಿದರು. ಸವದಿ ಬಿಜೆಪಿಗೆ ಬರುತ್ತಾರೆ ಎಂದು ಬೀದಿಗಳಲ್ಲಿ ಜನ ಮಾತನಾಡಿಕೊಳ್ಳುತ್ತಿದ್ದಾರೆ ಅಷ್ಟೇ, ಆದರೆ ಕಾರ್ಯಕರ್ತರು ಇಂತಹ ಮಾತುಗಳಿಗೆ ಕಿವಿಗೊಡಬಾರದು. ಅವರನ್ನು ಮರಳಿ ಪಕ್ಷಕ್ಕೆ ತೆಗೆದುಕೊಳ್ಳುವ ಪ್ರಮೇಯವೇ ಇಲ್ಲ ಎಂದು ಹರಿಹಾಯ್ದರು.

ಮುಂದುವರಿದು ಮಾತನಾಡಿದ ಅವರು, 2004 ರಿಂದಲೂ ಸವದಿ ಅವರು ಜಾತಿ ಆಧಾರಿತ ರಾಜಕಾರಣ ಮಾಡುತ್ತಾ ಬಂದಿದ್ದಾರೆ, ಅದು ಅವರ ಚುನಾವಣಾ ತಂತ್ರ ಇರಬಹುದು ಎಂದು ಟೀಕಿಸಿದರು. ಸವದಿ ಅವರು ಪಕ್ಷಕ್ಕೆ ಬರುತ್ತಾರೋ ಅಥವಾ ಬಿಡುತ್ತಾರೋ ಎಂಬುದು ಬೇರೆ ವಿಷಯ, ಆದರೆ ಮುಂಬರುವ ಚುನಾವಣೆಯಲ್ಲಿ ಅಥಣಿಯಲ್ಲಿ ಕಮಲ ಅರಳಿಸುವುದೇ ನಮ್ಮ ಏಕೈಕ ಗುರಿ. ಬಿಜೆಪಿ ಕಾರ್ಯಕರ್ತರು ಒಗ್ಗಟ್ಟಾಗಿ ಕೆಲಸ ಮಾಡಿ ಪಕ್ಷವನ್ನು ಗೆಲ್ಲಿಸಬೇಕು ಎಂದು ಕರೆ ನೀಡಿದರು. ಜಾರಕಿಹೊಳಿ ಅವರ ಈ ಹೇಳಿಕೆಯು ಬೆಳಗಾವಿ ಜಿಲ್ಲಾ ರಾಜಕಾರಣದಲ್ಲಿ ತೀವ್ರ ಸಂಚಲನ ಮೂಡಿಸಿದೆ.

Tags:

error: Content is protected !!