ಪಂಚಮಸಾಲಿ ಪೀಠದ ಜಯಮೃತ್ಯುಂಜಯ ಸ್ವಾಮೀಜಿ ವಿರುದ್ಧ ಮಹಿಳೆಯೊಬ್ಬರು ದೂರು ದಾಖಲಿಸಿದ ಬೆನ್ನಲ್ಲೇ, ಸಮಾಜದ ಮುಖಂಡ ವಿಜಯಾನಂದ ಕಾಶಪ್ಪನವರ್ ಗುಡುಗಿದ್ದಾರೆ. ಸ್ವಾಮೀಜಿಯವರ ಅಕ್ರಮ ಸಂಬಂಧಗಳು ನಮಗೆ ಮೊದಲೇ ತಿಳಿದಿತ್ತು, ಅದಕ್ಕಾಗಿಯೇ ಅವರನ್ನು ಪೀಠದಿಂದ ದೂರವಿಟ್ಟಿದ್ದೆವು ಎಂದು ಹೇಳುವ ಮೂಲಕ ಹೊಸ ಬಾಂಬ್ ಸಿಡಿಸಿದ್ದಾರೆ.

ಬಾಗಲಕೋಟೆಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ವಿಜಯಾನಂದ ಕಾಶಪ್ಪನವರ್, ಜಯಮೃತ್ಯುಂಜಯ ಸ್ವಾಮೀಜಿ ವಿರುದ್ಧ ಕೇಳಿಬಂದಿರುವ ಲೈಂಗಿಕ ದೂರಿನ ವಿಚಾರವಾಗಿ ಆಕ್ರೋಶ ಹೊರಹಾಕಿದ್ದಾರೆ. “ಈ ಘಟನೆ ನಡೆದ ದಿನವೇ ಅನೇಕರು ನನಗೆ ಫೋನ್ ಮಾಡಿ ಮಾಹಿತಿ ನೀಡಿದ್ದರು. ಇವರು ಇಂತಹ ಅಕ್ರಮ ಸಂಬಂಧಗಳನ್ನು ಒಂದಲ್ಲ, ಎರಡಲ್ಲ, ಹತ್ತಾರು ಬಾರಿ ಮಾಡಿದ್ದಾರೆ. ಸಮಾಜದ ಹಣವನ್ನು ಬಳಸಿ ಸಾಕಷ್ಟು ಆಸ್ತಿ ಮಾಡಿದ್ದಾರೆ. ಪವಿತ್ರವಾದ ಬಸವಣ್ಣನವರ ಐಕ್ಯ ಸ್ಥಳ ಅಪವಿತ್ರವಾಗಬಾರದು ಎಂಬ ಕಾರಣಕ್ಕೆ ನಾವು ಈ ಹಿಂದೆಯೇ ಇವರನ್ನು ಪೀಠದಿಂದ ಹೊರಹಾಕಿದ್ದೆವು” ಎಂದು ಸ್ಫೋಟಕ ಮಾಹಿತಿ ಬಿಚ್ಚಿಟ್ಟಿದ್ದಾರೆ.
ಶ್ರೀಗಳ ವಿರುದ್ಧದ ನಡವಳಿಕೆ ಬಗ್ಗೆ ಕಿಡಿಕಾರಿದ ಕಾಶಪ್ಪನವರ್, ಪೀಠದ ಬೈಲಾದಲ್ಲಿರುವ ನಿಯಮಗಳನ್ನು ಸ್ವಾಮೀಜಿ ಸಂಪೂರ್ಣವಾಗಿ ಉಲ್ಲಂಘಿಸಿದ್ದಾರೆ ಎಂದು ಆರೋಪಿಸಿದರು. “೨೦೧೭ರಿಂದಲೇ ಇವರ ಚಟುವಟಿಕೆಗಳ ಬಗ್ಗೆ ನಮಗೆ ಅರಿವಿತ್ತು. ಸಮಾಜದ ಮರ್ಯಾದೆ ಹರಾಜಾಗಬಾರದು ಎಂದು ನಾವು ಸುಮ್ಮನಿದ್ದೆವು. ಆದರೆ ಈಗ ಅನ್ಯಾಯಕ್ಕೊಳಗಾದ ಮಹಿಳೆ ನ್ಯಾಯ ಕೇಳುತ್ತಿರುವುದು ಸಹಜವಾಗಿದೆ. ತಮ್ಮ ಚಾರಿತ್ರ್ಯ ಸ್ವಚ್ಛವಾಗಿದ್ದರೆ ಇವರು ಕೋರ್ಟ್ನಿಂದ ಸ್ಟೇ ತರುವ ಅಗತ್ಯವೇನಿತ್ತು?” ಎಂದು ಪ್ರಶ್ನಿಸುವ ಮೂಲಕ ಸ್ವಾಮೀಜಿಯವರ ನೈತಿಕತೆಯನ್ನು ಪ್ರಶ್ನಿಸಿದ್ದಾರೆ.
ಇದೇ ವೇಳೆ ಸ್ವಾಮೀಜಿಯನ್ನು ಬೆಂಬಲಿಸುತ್ತಿರುವ ರಾಜಕೀಯ ನಾಯಕರ ವಿರುದ್ಧವೂ ಕಾಶಪ್ಪನವರ್ ವಾಗ್ದಾಳಿ ನಡೆಸಿದರು. “ಬಸನಗೌಡ ಪಾಟೀಲ್ ಯತ್ನಾಳ್, ಅರವಿಂದ್ ಬೆಲ್ಲದ ಹಾಗೂ ಸಿಸಿ ಪಾಟೀಲ್ ಅಂತಹ ನಾಯಕರು ಇವರನ್ನು ಹೊತ್ತುಕೊಂಡು ತಿರುಗುತ್ತಿದ್ದರಲ್ಲ, ಈಗ ಅವರೇ ಜನರಿಗೆ ಉತ್ತರ ಕೊಡಲಿ. ಅವರಿಗಾಗಿ ಪ್ರತ್ಯೇಕ ಮಠ ಕಟ್ಟುತ್ತೇವೆ ಎಂದವರು ಈಗ ತಮ್ಮ ನಿಲುವು ತಿಳಿಸಲಿ. ನಾವು ಈಗಾಗಲೇ ಅವರ ಜೊತೆಗಿನ ಸಂಬಂಧ ಕಡಿದುಕೊಂಡಿದ್ದೇವೆ” ಎಂದು ಹೇಳುವ ಮೂಲಕ ಪಂಚಮಸಾಲಿ ಹೋರಾಟದ ನಾಯಕರ ನಡುವಿನ ಶೀತಲ ಸಮರವನ್ನು ಬಹಿರಂಗಪಡಿಸಿದ್ದಾರೆ.
