ಬೆಳಗಾವಿ ನಗರದಲ್ಲಿ ಅಕ್ರಮ ಚಟುವಟಿಕೆಗಳ ವಿರುದ್ಧ ಪೊಲೀಸರು ಸಮರ ಸಾರಿದ್ದಾರೆ. ಒಂದೆಡೆ ಪರವಾನಿಗೆ ಇಲ್ಲದೆ ಮದ್ಯ ಮಾರುತ್ತಿದ್ದ ವ್ಯಕ್ತಿಯನ್ನು ಸೆರೆಹಿಡಿದರೆ, ಇನ್ನೊಂದೆಡೆ ಸಾರ್ವಜನಿಕ ಸ್ಥಳದಲ್ಲಿ ಗಾಂಜಾ ಸೇವಿಸಿ ಅಸಹಜವಾಗಿ ವರ್ತಿಸುತ್ತಿದ್ದ ಯುವಕರಿಗೆ ಬಿಸಿ ಮುಟ್ಟಿಸಿದ್ದಾರೆ.

ಬೆಳಗಾವಿ ನಗರದ ಹಿರೇಬಾಗೇವಾಡಿ, ಖಡೇಬಜಾರ, ಕಾಕತಿ ಹಾಗೂ ಮಾಳಮಾರುತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಕ್ರಮ ಚಟುವಟಿಕೆಗಳ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ಹಿರೇಬಾಗೇವಾಡಿ ಪಿಎಸ್ಐ ಅವಿನಾಶ ಎ. ವೈ. ಹಾಗೂ ಸಿಬ್ಬಂದಿ ರೇಣುಕಾ ಪೆಟ್ರೋಲ್ ಬಂಕ್ ಹತ್ತಿರ ಕಾರ್ಯಾಚರಣೆ ನಡೆಸಿ, ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ಕೆ.ಕೆ.ಕೊಪ್ಪದ ರಾಜು ಬಸಪ್ಪ ಬಸನ್ನವರ ಎಂಬಾತನನ್ನು ಬಂಧಿಸಿದ್ದಾರೆ. ಆತನಿಂದ ಸುಮಾರು 36,140 ರೂಪಾಯಿ ಮೌಲ್ಯದ ವಿವಿಧ ಕಂಪನಿಗಳ ವಿಸ್ಕಿ ಸ್ಯಾಚೇಟ್ಗಳು ಹಾಗೂ ಹಿರೋ ಪ್ಯಾಶನ್ ಪ್ರೋ ಬೈಕ್ ವಶಪಡಿಸಿಕೊಳ್ಳಲಾಗಿದೆ. ಅಬಕಾರಿ ಕಾಯ್ದೆಯಡಿ ಈ ಪ್ರಕರಣ ದಾಖಲಾಗಿದೆ.
ಮತ್ತೊಂದೆಡೆ ಮಾದಕ ವಸ್ತುಗಳ ವಿರುದ್ಧ ಕಾರ್ಯಾಚರಣೆ ಮುಂದುವರಿಸಿರುವ ಪೊಲೀಸರು, ಸಾರ್ವಜನಿಕ ಸ್ಥಳಗಳಲ್ಲಿ ಗಾಂಜಾ ಸೇವಿಸಿ ಉಪದ್ರವ ನೀಡುತ್ತಿದ್ದ ನಾಲ್ವರನ್ನು ಜೈಲಿಗಟ್ಟಿದ್ದಾರೆ. ಖಡೇಬಜಾರ ಠಾಣೆ ವ್ಯಾಪ್ತಿಯ ಸರ್ದಾರ ಗ್ರೌಂಡ್ ಬಳಿ ಅಸಹಜವಾಗಿ ವರ್ತಿಸುತ್ತಿದ್ದ ಕೃತಿಕ ಸಂಜಯ ಬಡಿಗ ಎಂಬಾತನನ್ನು ಎಎಸ್ಐ ಬಿ. ಐ ಪಾಟೀಲ ತಂಡ ಬಂಧಿಸಿದೆ. ಕಾಕತಿ ಠಾಣಾ ವ್ಯಾಪ್ತಿಯ ಅಂಬೇವಾಡಿಯಲ್ಲಿ ಪಿಎಸ್ಐ ಮೃತ್ಯುಂಜಯ ಮಠದ ನೇತೃತ್ವದಲ್ಲಿ ಶ್ರೀನಾಥ ರಾಮಚಂದ್ರ ಅಂಬೇಕರ ಮತ್ತು ಸಾಗರ ದೇವರಾಜ ಅಂಬೇಕರ ಎಂಬುವವರನ್ನು ವಶಕ್ಕೆ ಪಡೆಯಲಾಗಿದೆ. ಅಲ್ಲದೆ, ಮಾಳಮಾರುತಿ ಠಾಣಾ ವ್ಯಾಪ್ತಿಯ ನ್ಯೂ ಗಾಂಧಿ ನಗರದಲ್ಲಿ ಗಾಂಜಾ ಅಮಲಿನಲ್ಲಿದ್ದ ಪ್ರಣೀತ ಈಶ್ವರ ಪೂಜಾರಿ ಎಂಬಾತನನ್ನು ಪಿಎಸ್ಐ ಹೊನ್ನಪ್ಪ ತಳವಾರ ತಂಡ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ ಬಂಧಿಸಿದೆ. ಕರ್ತವ್ಯದಕ್ಷತೆ ಮೆರೆದ ಎಲ್ಲಾ ಅಧಿಕಾರಿ ಹಾಗೂ ಸಿಬ್ಬಂದಿಯವರ ಕಾರ್ಯವನ್ನು ಬೆಳಗಾವಿ ನಗರ ಪೊಲೀಸ್ ಆಯುಕ್ತರು ಹಾಗೂ ಡಿಸಿಪಿ ಅವರು ಶ್ಲಾಘಿಸಿದ್ದಾರೆ
