Belagavi

ಕಾನೂನನ್ನು ಕೈಗೆತ್ತಿಕೊಳ್ಳುವ ಬದಲು ಕಾನೂನು ಅರಿತುಕೊಳ್ಳಿ ಅಪರಾಧಿಕ ಕಾನೂನುಗಳ ಅರಿವು ಕಾರ್ಯಕ್ರಮ

Share

ಬೆಳಗಾವಿ: ಮಹಾಂತೇಶ ನಗರದ ಗಾಜಿನ ಮನೆಯಲ್ಲಿ (ಗ್ಲಾಸ್ ಹೌಸ್) ರವಿವಾರ ದಿನಾಂಕ 5-4-2026 ರಂದು ‘ನ್ಯಾಯವೆಂಬ ಬೆಳಕು’ ಸಂಸ್ಥೆಯಿಂದ ಅಪರಾಧಿಕ ಕಾನೂನುಗಳ ಅರಿವು ಕಾರ್ಯಕ್ರಮ ಜರುಗಿತು.
ಗ್ಯಾಂಗ್ ವಾಡಿ ಪ್ರದೇಶದ ಯುವ ಜನತೆಯನ್ನು ಉದ್ದೇಶಿಸಿ ಸಂಸ್ಥೆಯ ಚೇರ್ಮನ್ ಆದ ಸುನಿಲ ಸಾಣಿಕೊಪ್ಪ ನ್ಯಾಯವಾದಿ ಮಾತನಾಡಿ, ಸಿನಿಮಾದಲ್ಲಿ ಅಥವಾ ಸಾಮಾಜಿಕ ಜಾಲತಾಣಗಳಲ್ಲಿ ಕಂಡುಬರುವ ನ್ಯಾಯಾಲಯದ ಚಿತ್ರಣಕ್ಕೂ ವಾಸ್ತವದ ನ್ಯಾಯಾಲಯಕ್ಕೂ ಬಹಳ ವ್ಯತ್ಯಾಸವಿದೆ. ಅವುಗಳು ಕೇವಲ ಅನುರಂಜನೆಗೆ

ಸೀಮಿತವಾಗಿದ್ದು ನಿಜವಲ್ಲ. ಕಾನೂನು ವಿಶಾಲವಾದ ಸಮುದ್ರವಿದ್ದಂತೆ. ಆದರೆ ಪ್ರತಿಯೊಬ್ಬರಿಗೂ ಕಾನೂನಿನ ವ್ಯವಸ್ಥೆಯ ಸ್ವಲ್ಪವಾದರೂ ಅರಿವು ಇರಬೇಕು. ಕಾನೂನು ಗೊತ್ತಿಲ್ಲ ಎಂದರೆ ಕ್ಷಮಿಸಲು ಬರುವುದಿಲ್ಲ. ಅದಕ್ಕಾಗಿ ಸಮಸ್ಯೆ ಗೊಂದಲ ಇದ್ದಾಗ ಅಥವಾ ಅನ್ಯಾಯವಾದಾಗ, ಕಾನೂನು ತಜ್ಞರ ಸಲಹೆ ಪಡೆಯಬೇಕು. ಕಾನೂನಿನ ಪ್ರಕಾರ ಕ್ರಮ ಕೈಗೊಳ್ಳಬೇಕು. ಆದರೆ ಯಾವುದೋ ಆವೇಶದಲ್ಲಿ ಅಥವಾ ತಪ್ಪು ತಿಳುವಳಿಕೆಯಿಂದ ಕಾನೂನನ್ನು ಕೈಗೆತ್ತಿಕೊಂಡು ಅಪರಾಧಿಕ ಕೃತ್ಯ ಮಾಡಿದರೆ ಶಿಕ್ಷೆ ಆಗುತ್ತದೆ. ಅಕಸ್ಮಾತ್ ನ್ಯಾಯಾಲಯದಿಂದ ಬಿಡುಗಡೆ ಹೊಂದಿದರೂ ಸಹ, ಬಹಳ ವರ್ಷ ಕೋರ್ಟಿಗೆ ಅಲೆದಾಡಿ ಅಮೂಲ್ಯವಾದ ಸಮಯ, ಹಣ, ಶ್ರಮ ವ್ಯರ್ಥವಾಗುತ್ತದೆ. ಅದೇ ಒಂದು ರೀತಿ ಪರೋಕ್ಷ ಶಿಕ್ಷೆಯಾಗುತ್ತದೆ. ಆದ್ದರಿಂದ ಪ್ರತಿಯೊಬ್ಬರೂ ಕಾನೂನನ್ನು ಅರಿತುಕೊಳ್ಳಬೇಕು ಮತ್ತು ಕಾನೂನನ್ನು ಗೌರವಿಸಬೇಕು ಎಂದು ಕಿವಿಮಾತು ಹೇಳಿದರು.

ಕಾರ್ಯಕ್ರಮವನ್ನು ವಿಶ್ವ ಹಿಂದು ಪರಿಷತ್ ಅಧ್ಯಕ್ಷರಾದ ಆನಂದ್ ಕರಲಿಂಗಣ್ಣವರ ಮತ್ತು ಉಪಾಧ್ಯಕ್ಷರಾದ ನಾಗೇಶ್ ಕಾಂಬಳೆ ಅವರ ಸಹಯೋಗದಲ್ಲಿ ಮತ್ತು ಚಾಣಕ್ಯ ಶಿಕ್ಷಣ ಮತ್ತು ಸಮಾಜ ಕಲ್ಯಾಣ ಸಂಸ್ಥೆ ಅಧ್ಯಕ್ಷರಾದ ನಾಗರಾಜ್ ಪಾಟೀಲ್ ಅವರ ಸಹಯೋಗದೊಂದಿಗೆ ನಡೆಸಿಕೊಡಲಾಯಿತು.

ಸಂಪನ್ಮೂಲ ವ್ಯಕ್ತಿಯಾಗಿ ತನ್ಮಯ್ ಕುಚುನೂರೆ ಮಾತನಾಡಿ ಅಪರಾಧ ಎಂದರೇನು ಯಾವಾಗ ಅಪರಾಧಾಗುತ್ತದೆ ಅದರಿಂದ ಆಗುವ ಪರಿಣಾಮಗಳೇನು ಯಾವ ರೀತಿ ಶಿಕ್ಷೆ ನೀಡಲಾಗುತ್ತದೆ ಮತ್ತು ವಿನಾಕಾರಣ ಜೈಲಿಗೆ ಹೋದರೆ ಅಲ್ಲಿ ಎಷ್ಟು ತೊಂದರೆ ಅನಾನುಕೂಲತೆಗಳು ಇವೆ ಎಂಬುದರ ಅರಿವು ಮೂಡಿಸಿದರು. ಅತಿಥಿಗಳಾಗಿ ಹಿರಿಯ ನ್ಯಾಯವಾದಿ ಶಿವಾನಂದ ಗಣಮುಖಿ ಮಾತನಾಡಿ ಅಪರಾಧಿಕ ಪ್ರಕರಣಗಳು ಯಾವ ರೀತಿ ನ್ಯಾಯಾಲಯದಲ್ಲಿ ನಡೆಯುತ್ತವೆ ಮತ್ತು ಜಾಮೀನು ಪಡೆಯುವ ಕುರಿತು ಹಾಗೂ ಸೂಕ್ತ ಸಮಯದಲ್ಲಿ ವಕೀಲರ ಸಹಾಯ ಪಡೆಯುವ ಕುರಿತು ತಿಳಿವಳಿಕೆ ನೀಡಿದರು. ಇನ್ನೋರ್ವ ಅತಿಥಿ ಹಿರಿಯ ನ್ಯಾಯವಾದಿ ಚನ್ನಬಸಪ್ಪ (ರಾಜು) ಬಾಗೇವಾಡಿ ಮಾತನಾಡಿ ಪೊಲೀಸರಿಗೆ ಸಹಿತ ಕಾನೂನು ನಿಯಮಗಳು ಇವೆ, ಅವರು ಸಹಿತ ಕಾನೂನು ಚೌಕಟ್ಟು ಮೀರಿ ಕೆಲಸ ಮಾಡಲು ಅವಕಾಶವಿಲ್ಲ ವಿನಾಕಾರಣ ಪೊಲೀಸರು ತೊಂದರೆ ಕೊಟ್ಟರೆ ವಕೀಲರ ಸಹಾಯ ಪಡೆಯಬೇಕು ಎಂದು ಸಲಹೆ ನೀಡಿದರು.


ನ್ಯಾಯವೆಂಬ ಬೆಳಕು ಸಂಸ್ಥೆಯ ವೈಸ್ ಚೇರ್ಮನ್ ಸೋಮಶೇಖರ್ ಕತ್ತಿ ಕಾರ್ಯದರ್ಶಿ ವೃಷಭ ಪಾಟೀಲ್ ಮತ್ತು ಆಡಳಿತ ಮಂಡಳಿಯ ಸದಸ್ಯರಾದ ಆದರ್ಶ ಬಾಳಿಕಾಯಿ, ಸುಮಿತ್ ಗಣಮುಖಿ, ಅಮೋಘ ಸಾಣಿಕೊಪ್ಪ, ಓಂ ಶಿವಪೂಜಿಮಠ ಉಪಸ್ಥಿತರಿದ್ದರು. ಅಕ್ಷತಾ ದೇಶಪಾಂಡೆ ಮತ್ತು ಸುನಿಧಿ ಜೋಶಿ ಅವರು ಕಾರ್ಯಕ್ರಮ ನಡೆಸಿಕೊಟ್ಟರು

Tags:

error: Content is protected !!