ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಅರವಳ್ಳಿ ಗ್ರಾಮದಲ್ಲಿ ವಿಧಿಯ ಆಟವೋ ಎಂಬಂತೆ ಮನಕಲಕುವ ಘಟನೆಯೊಂದು ನಡೆದಿದೆ. ಒಂದೇ ದಿನ ಪತಿ ಮತ್ತು ಪತ್ನಿ ಸಾವನ್ನಪ್ಪುವ ಮೂಲಕ ಇಡೀ ಗ್ರಾಮವನ್ನೇ ಕಣ್ಣೀರಲ್ಲಿ ಮುಳುಗಿಸಿದ್ದಾರೆ.

ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಅರವಳ್ಳಿ ಗ್ರಾಮದ ನಿವಾಸಿ ಮಧುರಾ ಕರೆಪ್ಪ ಮಾದರ (30) ಕಳೆದ ಕೆಲವು ದಿನಗಳಿಂದ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದರು. ಅನಾರೋಗ್ಯದ ಕಾರಣದಿಂದ ಉಂಟಾದ ಮಾನಸಿಕ ಕಿರಿಕಿರಿ ಹಾಗೂ ನೋವಿನಿಂದ ಮನನೊಂದ ಇವರು, ಜೀವನದಲ್ಲಿ ಜಿಗುಪ್ಸೆಗೊಂಡು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಧುರಾ ಅವರ ಈ ಅನಿರೀಕ್ಷಿತ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಕುಟುಂಬ ಸದಸ್ಯರ ಮತ್ತು ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ.
ಇತ್ತ ಪತ್ನಿ ವಿಷ ಸೇವಿಸಿರುವ ಕಹಿ ಸುದ್ದಿಯನ್ನು ಕೇಳಿ ಆತಂಕಗೊಂಡ ಪತಿ ಕರೆಪ್ಪ ಗಂಗಪ್ಪ ಮಾದರ (36), ಕೂಡಲೇ ಆಸ್ಪತ್ರೆಗೆ ಧಾವಿಸಲು ತನ್ನ ಬೈಕ್ ಹತ್ತಿ ಹೊರಟಿದ್ದರು. ಆದರೆ ವಿಧಿಯಾಟವೇ ಬೇರೆಯಾಗಿತ್ತು, ಪತ್ನಿಯ ಮುಖ ನೋಡಲು ಆಸ್ಪತ್ರೆಗೆ ತೆರಳುತ್ತಿದ್ದ ಮಾರ್ಗಮಧ್ಯೆಯೇ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಕರೆಪ್ಪ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಪತ್ನಿ ಸಾವಿನ ಬೆನ್ನಲ್ಲೇ ಪತಿಯೂ ಅಪಘಾತಕ್ಕೆ ಬಲಿಯಾದ ಸುದ್ದಿ ತಿಳಿದ ಗ್ರಾಮಸ್ಥರು ಈ ದಂಪತಿಗಳ ದಾರುಣ ಅಂತ್ಯಕ್ಕೆ ಬೆಚ್ಚಿಬಿದ್ದಿದ್ದಾರೆ.
ಕರೆಪ್ಪ ಮತ್ತು ಮಧುರಾ ದಂಪತಿಗಳ 9 ವರ್ಷಗಳ ಸುಂದರ ದಾಂಪತ್ಯದಲ್ಲಿ ಒಬ್ಬಳು ಹೆಣ್ಣು ಮಗು ಹಾಗೂ ಇಬ್ಬರು ಗಂಡು ಮಕ್ಕಳಿದ್ದಾರೆ. ಕಣ್ಣು ಮುಚ್ಚಿ ತೆರೆಯುವುದರೊಳಗೆ ತಂದೆ ಮತ್ತು ತಾಯಿ ಇಬ್ಬರನ್ನೂ ಕಳೆದುಕೊಂಡ ಈ ಮೂವರು ಕಂದಮ್ಮಗಳ ಸ್ಥಿತಿ ಈಗ ಅತಂತ್ರವಾಗಿದ್ದು, ಮಕ್ಕಳ ರೋಧನೆ ಎಲ್ಲರ ಕಣ್ಣಲ್ಲಿ ನೀರು ತರಿಸುತ್ತಿದೆ.
ಸದ್ಯ ಬೈಲಹೊಂಗಲ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದು, ಮೃತರ ಕುಟುಂಬಕ್ಕೆ ಮತ್ತು ಅನಾಥರಾದ ಮಕ್ಕಳಿಗೆ ಇಡೀ ಊರೇ ಸಾಂತ್ವನ ಹೇಳುತ್ತಿದೆ.
