ಬೆಳಗಾವಿ ನಗರದ ಶಹಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಾಮಾಜಿಕ ಜಾಲತಾಣ ಇನ್ಸ್ಟಾಗ್ರಾಂ ಮೂಲಕ ಪರಿಚಯವಾದ ಯುವಕನೊಬ್ಬ, ಯುವತಿಗೆ ಸ್ನೇಹ ಬೆಳೆಸಿ ಬಳಿಕ ಮದುವೆಯಾಗುವುದಾಗಿ ನಂಬಿಸಿ ಆಕೆಯನ್ನು ಲೈಂಗಿಕವಾಗಿ ಬಳಸಿಕೊಂಡು ಬ್ಲ್ಯಾಕ್ ಮೇಲ್ ಮಾಡಿದ ಘಟನೆ ಬೆಳಕಿಗೆ ಬಂದಿದೆ.

ಕಳೆದ 2019ರಲ್ಲಿ ಈಶ್ವರಸಿಂಗ್ ಪ್ರೇಮಸಿಂಗ್ ಬಡಪೂಜೆ ಮಹದ್ವಾ ರಸ್ತೆಯ ಯುವಕ, ಇನ್ಸ್ಟಾಗ್ರಾಂ ಮೂಲಕ ಯುವತಿಯನ್ನು ಸಂಪರ್ಕಿಸಿದ್ದಾನೆ. ಆರಂಭದಲ್ಲಿ ಸ್ನೇಹ ಬೆಳೆಸಿ, ನಂತರ ಪ್ರೀತಿ ವ್ಯಕ್ತಪಡಿಸಿ ಮದುವೆಯಾಗುವುದಾಗಿ ಭರವಸೆ ನೀಡಿದ್ದಾನೆ. ಈ ನಂಬಿಕೆಯನ್ನು ದುರುಪಯೋಗಪಡಿಸಿಕೊಂಡ ಯುವಕ, ಯುವತಿಯನ್ನು ಲೈಂಗಿಕವಾಗಿ ಬಳಸಿಕೊಂಡು ಮೋಸ ಮಾಡಿದ್ದಾನೆ ಎನ್ನುವ ಆರೋಪ ಕೇಳಿಬಂದಿದೆ.ಇದರ ಜೊತೆಗೆ, ಯುವತಿಗೆ ತಿಳಿಯದೆ ಆಕೆಯ ಖಾಸಗಿ ಕ್ಷಣಗಳನ್ನು ವಿಡಿಯೋ ಹಾಗೂ ಫೋಟೋಗಳ ರೂಪದಲ್ಲಿ ಚಿತ್ರೀಕರಿಸಿದ್ದಾನೆ. ನಂತರ ಈ ವಿಡಿಯೋ ಮತ್ತು ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡುವುದಾಗಿ ಬೆದರಿಕೆ ಹಾಕಿ, ಹಣಕ್ಕಾಗಿ ಒತ್ತಡ ಹೇರುವ ಕೆಲಸ ಮಾಡಿದ್ದಾನೆ.
ಯುವತಿಯ ತಂದೆಯ ಆಸ್ತಿ ಮಾರಾಟದಿಂದ ಬಂದ ಸುಮಾರು 8 ಲಕ್ಷ ರೂಪಾಯಿಯನ್ನು ಕೊಡದಿದ್ದರೆ ವಿಡಿಯೋ ಹೊರಹಾಕುವುದಾಗಿ ಬೆದರಿಕೆ ಹಾಕಿದ್ದಾನೆ. ಅಲ್ಲದೆ, ಉದ್ಯೋಗ ಕಲ್ಪಿಸುವುದಾಗಿ ಸುಳ್ಳು ಭರವಸೆ ನೀಡಿ, ಯುವತಿಯನ್ನು ಮತ್ತಷ್ಟು ನಂಬಿಸಿ ಆಕೆಯ ತಂದೆಯ ಎಫ್ಡಿ ಹಣವನ್ನು ಮುರಿದುಕೊಳ್ಳುವಂತೆ ಮಾಡಿದ್ದಾನೆ. ಈ ರೀತಿ, ಒಟ್ಟು ಸುಮಾರು 7 ಲಕ್ಷ ರೂಪಾಯಿ ನಗದು ಮತ್ತು 150 ಗ್ರಾಂ ಚಿನ್ನವನ್ನು ಯುವತಿಯಿಂದ ವಸೂಲಿ ಮಾಡಿಕೊಂಡಿರುವುದು ತಿಳಿದುಬಂದಿದೆ. ವರ್ಷಗಳ ಕಾಲ ನಡೆದ ಈ ಮೋಸದ ಕೃತ್ಯ ಕೊನೆಗೂ ಯುವತಿಯ ಮನೆಯವರಿಗೆ ವಿಷಯ ತಿಳಿದ ನಂತರ ಬಯಲಾಗಿದ್ದು, ಆರೋಪಿಯ ನಿಜ ಬಣ್ಣ ಹೊರಬಂದಿದೆ. ಯುವತಿಗೆ ಅತ್ಯಾಚಾರ ಮಾಡಿ ವಿಡಿಯೋ, ಫೋಟೋ ಸಾಮಾಜಿಕ ಜಾಲತಾಣದಲ್ಲಿ ಬಿಡುಗಡೆ ಮಾಡುವುದಾಗಿ ಬೇದರಿಕೆ ಹಾಕಿದ ಆರೋಪಿ ಬಗ್ಗೆ ಸಾಕ್ಷಿ ಸಮೇತ ಶಹಾಪುರ ಪೊಲೀಸರಿಗೆ ದೂರು ನೀಡಲು ಸಂತ್ರಸ್ತ ಯುವತಿ ತೆರಳಿದರೂ ದೂರು ಸ್ವೀಕರಿಸಬೇಕಾದ ಪೊಲೀಸರು ರಾಜಿ ಪಂಚಾಯತಿ ಮಾಡಿಕೊಳ್ಳಿ ಎನ್ನುವ ಸಬೂಬು ಹೇಳುತ್ತಿದ್ದಾರೆ ಎಂದು ಸಂತ್ರಸ್ತ ಯುವತಿ ಆರೋಪಿಸಿದ್ದಾಳೆ.
ಯುವತಿಗೆ ಪಟಾಯಿಸಿ ಲಕ್ಷಾಂತರ ರೂ. ಹಣ ಪಂಗನಾಮ ಹಾಕಿರುವ ಈಶ್ವರ ಸಿಂಗ್ ಬಡಪೂಜೆ ಯುವತಿಯನ್ನು ಅತ್ಯಾಚಾರ ಮಾಡಿದ್ದಾನೆ. ಮನೆಯಲ್ಲಿ ತಿಳಿದ ತಕ್ಷಣವೇ ಈಶ್ವರ ಸಿಂಗ್ ಮನೆಯವರು 3 ಕೋಟಿ ರೂ. ಕೊಡಿ ಮದುವೆಯಾಗುವುದಾಗಿ ಬ್ಲ್ಯಾಕ್ ಮೇಲ್ ಮಾಡುತ್ತಿದ್ದಾರೆ. ಹೆದರಿಸಿ, ಬೇದರಿಸಿ ಬ್ಲ್ಯಾಕ್ ಮೇಲ್ ಮಾಡಿ ಅತ್ಯಾಚಾರ ಮಾಡಿರುವ ವಿಡಿಯೋ ಮಾಡಿಕೊಂಡು ಈಕೆಗೆ ಬ್ಲ್ಯಾಕ್ ಮೇಲ್ ಮಾಡಿ ಈಗ ಮತ್ತೆ ಬೇರೆ ಯುವತಿಯೊಂದಿಗೆ ಚೆಲ್ಲಾಟ ಆಡುತ್ತಿರುವ ಆರೋಪಿಯನ್ನು ಬಂಧಿಸಿ ಹೆಡೆಮುರಿ ಕಟ್ಟಬೇಕು ಎಂದು ಯುವತಿ ಮನೆಯವರು ಆಗ್ರಹಿಸಿದ್ದಾರೆ. ಫೇಸ್ ಬುಕ್ ಹಾಗೂ ಇನ್ಸಾಟ್ ಗ್ರಾಮ್ ನಲ್ಲಿ ಯುವತಿಯ ಸ್ನೇಹ ಬೆಳೆಸಿ ಬರೋಬರಿ 19 ಲಕ್ಷ ವಂಚನೆ ಮಾಡಿದ ಆರೋಪಿ ಈಶ್ವರ ಸಿಂಗ್ ಮೇಲೆ ಶಹಾಪುರ ಪೊಲೀಸರು ಪ್ರಕರಣ ದಾಖಲಿಸಿ ಯುವತಿಯ ಹಣ ಮರುಳಿಸಬೇಕೆಂದು ನ್ಯಾಯವಾದಿ ಮಂದಾಕಿನಿ ಅಪ್ಪುಗೋಳ ಆಗ್ರಹಿಸಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ರೀಲ್ಸ್ ಲೈಕ್ ಸಲುವಾಗಿ ಚಿತ್ರ ವಿಚಿತ್ರ ವಿಡಿಯೋ ಮಾಡಿ ಬಿಡುವ ಯುವತಿಯರು ಅಪರಿಚಿತ ಯುವಕರಿಂದ ಎಚ್ಚರಿಕೆಯಿಂದ ಇರಬೇಕು.
