Vijaypura

ಬೆಳ್ಳಂಬೆಳಿಗ್ಗೆ ಘರ್ಜಿಸಿದ ಜೆಸಿಬಿಗಳು; ವಿಜಯಪುರ ನಗರದ ಪ್ರಮುಖ ರಸ್ತೆ ಭಾಗ ಕ್ಲಿಯರ್

Share

ವಿಜಯಪುರ ನಗರದ ನಿವಾಸಿಗಳು ಇಂದು ಬೆಳಗಿನ ಜಾವ ಜೆಸಿಬಿ ಯಂತ್ರಗಳ ಗದ್ದಲಕ್ಕೆ ಎಚ್ಚರಗೊಂಡರು. ನಗರ ಮಹಾನಗರ ಪಾಲಿಕೆಯ ವತಿಯಿಂದ ಅತಿಕ್ರಮಣ ತೆರವು ಕಾರ್ಯಾಚರಣೆ ಆರಂಭಿಸಲಾಯಿತು.

ಅತೌಲಾ ಸರ್ಕಲ್‌ನಿಂದ ಜುಮ್ಮಾ ಮಸೀದಿ ರಸ್ತೆಯವರೆಗೆ ಇರುವ ಪ್ರಮುಖ ರಸ್ತೆಯಲ್ಲಿ ಈ ಕಾರ್ಯಾಚರಣೆ ನಡೆಯಿತು. ಸಂಚಾರಕ್ಕೆ ಅಡಚಣೆ ಉಂಟುಮಾಡುತ್ತಿದ್ದ ಅನಧಿಕೃತ ಕಟ್ಟಡಗಳು ಹಾಗೂ ಅತಿಕ್ರಮಣಗಳನ್ನು ತೆರವುಗೊಳಿಸುವುದು ಇದರ ಮುಖ್ಯ ಉದ್ದೇಶವಾಗಿತ್ತು.
ಈ ಕಾರ್ಯಾಚರಣೆ ಮಹಾನಗರ ಪಾಲಿಕೆ ಆಯುಕ್ತ ವಿಜಯಕುಮಾರ ಮೆಕ್ಕಳಕಿ ಅವರ ಮಾರ್ಗದರ್ಶನದಲ್ಲಿ ನಡೆಯಿತು. ಪಾಲಿಕೆ ಅಧಿಕಾರಿಗಳ ಪ್ರಕಾರ, ಅಂಗಡಿ ಮಾಲೀಕರಿಗೆ ಮುಂಚಿತವಾಗಿ ನೋಟಿಸ್ ನೀಡಿ, ಅತಿಕ್ರಮಣಗಳನ್ನು ತೆರವುಗೊಳಿಸಲು ಸೂಚಿಸಲಾಗಿತ್ತು. ಆದರೆ ನಿಗದಿತ ಅವಧಿಯಲ್ಲಿ ಅನೇಕರು ಕ್ರಮ ಕೈಗೊಳ್ಳದ ಹಿನ್ನೆಲೆ, ಪಾಲಿಕೆ ಅಧಿಕಾರಿಗಳು ಸ್ವತಃ ಕಾರ್ಯಾಚರಣೆಗೆ ಮುಂದಾದರು.

ಈ ಸಂದರ್ಭದಲ್ಲಿ ಮಾತನಾಡಿದ ಆಯುಕ್ತ ಮೆಕ್ಕಲಕಿ, ನಗರದ ಸಮಗ್ರ ಅಭಿವೃದ್ಧಿಗಾಗಿ ಮತ್ತು ಸಂಚಾರ ಸುಗಮಗೊಳಿಸಲು ಇಂತಹ ಕ್ರಮಗಳು ಅನಿವಾರ್ಯವೆಂದು ತಿಳಿಸಿದ್ದಾರೆ. ನಗರದಲ್ಲಿ ಶಿಸ್ತಿನ ಜೊತೆಗೆ ಮೂಲಸೌಕರ್ಯ ಅಭಿವೃದ್ಧಿಗೆ ಇದು ಸಹಾಯಕವಾಗಲಿದೆ ಎಂದರು.
ಕಾರ್ಯಾಚರಣೆ ವೇಳೆ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸ್ ಸಿಬ್ಬಂದಿ ಮತ್ತು ಪಾಲಿಕೆ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು.
ನಗರವನ್ನು ಸ್ವಚ್ಛ ಮತ್ತು ಸುವ್ಯವಸ್ಥಿತವಾಗಿಡುವ ಉದ್ದೇಶದಿಂದ ಮುಂದಿನ ದಿನಗಳಲ್ಲಿ ನಗರದ ಇತರ ಭಾಗಗಳಲ್ಲಿಯೂ ಇಂತಹ ಕಾರ್ಯಾಚರಣೆಗಳನ್ನು ಕೈಗೊಳ್ಳಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Tags:

error: Content is protected !!