BELAGAVI

ಬಿಜೆಪಿ ಸಂಘಟನೆಗೆ ರಮೇಶ್ ಜಾರಕಿಹೊಳಿ ಪಣ: ಯತ್ನಾಳ್ ವಿಚಾರದಲ್ಲಿ ಹೈಕಮಾಂಡ್ ಅಂತಿಮ ಎಂದ ‘ಸಾಹುಕಾರ್’

Share

ಪಕ್ಷಕ್ಕೆ ಮರಳುವುದಾದರೆ ಯತ್ನಾಳ್ ಅವರಿಗೆ ಸ್ವಾಗತ, ಆದರೆ ಹೈಕಮಾಂಡ್ ನಿರ್ಣಯವೇ ಅಂತಿಮ. ಯತ್ನಾಳ್, ಅವರು ಇತಿಮಿತಿಯಲ್ಲಿ ಮಾತನಾಡಿದರೆ ಒಳ್ಳೆಯದು ಎಂಬ ನೇರ ಸಲಹೆಯನ್ನು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರು ನೀಡಿದರು.

ರಾಮದುರ್ಗದಲ್ಲಿ ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಅವರು, ತಳಮಟ್ಟದಿಂದ ಪಕ್ಷವನ್ನು ಬಲಪಡಿಸುವ ಅಗತ್ಯವನ್ನು ಒತ್ತಿ ಹೇಳಿದರು. “ವೈಯಕ್ತಿಕ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ನಾವೆಲ್ಲರೂ ಒಂದಾಗಿ ಶ್ರಮಿಸಿದರೆ ಮುಂದಿನ ಬಾರಿ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದು ಖಚಿತ. ಪಕ್ಷದ ಹೈಕಮಾಂಡ್ ತೆಗೆದುಕೊಳ್ಳುವ ಯಾವುದೇ ನಿರ್ಣಯಗಳಿಗೆ ನಾವು ಬದ್ಧರಾಗಿರುತ್ತೇವೆ. ಮುಂಬರುವ ಉಪಚುನಾವಣೆಯಲ್ಲಿ ಎರಡೂ ಕ್ಷೇತ್ರಗಳಲ್ಲಿ ಕಮಲ ಅರಳಿಸಲು ಕಾರ್ಯಕರ್ತರೊಂದಿಗೆ ಸೇರಿ ಶ್ರಮಿಸುತ್ತೇವೆ” ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಇದೇ ವೇಳೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರಿಗೆ ಪಕ್ಷದಿಂದ ಬುಲಾವಾ ಬಂದಿರುವ ಬಗ್ಗೆ ತಮಗೆ ಮಾಹಿತಿಯಿಲ್ಲ ಎಂದು ತಿಳಿಸಿದ ಅವರು, ಯತ್ನಾಳ್ ಅವರು ಮರಳಿ ಪಕ್ಷಕ್ಕೆ ಬರುವುದಾದರೆ ಸ್ವಾಗತಾರ್ಹ ಎಂದರು. “ಯತ್ನಾಳ್ ಅವರು ಪಕ್ಷಕ್ಕೆ ಮರಳಿದರೆ ಸಂಘಟನೆಗೆ ಒಳ್ಳೆಯದೇ, ಆದರೆ ಅಂತಿಮವಾಗಿ ಹೈಕಮಾಂಡ್ ತೀರ್ಮಾನಕ್ಕೆ ನಾವೆಲ್ಲರೂ ತಲೆಬಾಗಬೇಕಾಗುತ್ತದೆ. ಅವರು ಇತಿಮಿತಿಯೊಳಗೆ ಮಾತನಾಡಿದರೆ ಗೌರವ ಹೆಚ್ಚುತ್ತದೆ” ಎಂದು ಪರೋಕ್ಷವಾಗಿ ಸಲಹೆ ನೀಡಿದರು. ಈ ಮೂಲಕ ಪಕ್ಷದ ಶಿಸ್ತು ಮತ್ತು ಒಗ್ಗಟ್ಟಿನ ಮಂತ್ರವನ್ನು ಜಾರಕಿಹೊಳಿ ಜಪಿಸಿದರು.

Tags:

error: Content is protected !!