ಬೆಳಗಾವಿ ಗ್ರಾಮೀಣ ಕ್ಷೇತ್ರದ ಅತಿವಾಡ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ವಿಕೋಪಕ್ಕೆ ತಲುಪಿದೆ. ಈ ಬಗ್ಗೆ ಮನವಿ ನೀಡಲು ಹೋದ ರೈತರಿಗೆ ಅಧಿಕಾರಿಗಳೇ ದರ್ಶನ ನೀಡದಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿರುವ ರೈತ ಸಂಘಟನೆಗಳು, ಪಂಚಾಯತ್ಗೆ ಬೀಗ ಜಡಿಯುವ ಎಚ್ಚರಿಕೆ ನೀಡಿವೆ.

ಬೆಳಗಾವಿ ತಾಲ್ಲೂಕಿನ ಅತಿವಾಡ ಗ್ರಾಮದಲ್ಲಿ ನೀರಿನ ತೀವ್ರ ಅಭಾವ ಸೃಷ್ಟಿಯಾಗಿದ್ದು, ಜನ ಮತ್ತು ಜಾನುವಾರುಗಳು ಹನಿ ನೀರಿಗೂ ಪರದಾಡುವಂತಾಗಿದೆ. ಈ ಸಮಸ್ಯೆಯ ಬಗ್ಗೆ ಗ್ರಾಮ ಪಂಚಾಯತ್ಗೆ ಮನವಿ ಸಲ್ಲಿಸಲು ರೈತ ಸಂಘಟನೆಯ ಪದಾಧಿಕಾರಿಗಳು ಇಂದು ಪಂಚಾಯತ್ ಕಚೇರಿಗೆ ಧಾವಿಸಿದ್ದರು. ಆದರೆ, ಎರಡು ದಿನ ಮುಂಚಿತವಾಗಿಯೇ ಮಾಹಿತಿ ನೀಡಿದ್ದರೂ ಸಹ ಪಂಚಾಯತ್ ಕಾರ್ಯದರ್ಶಿ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಕಚೇರಿಯಲ್ಲಿ ಇಲ್ಲದಿರುವುದು ರೈತರ ಆಕ್ರೋಶಕ್ಕೆ ಕಾರಣವಾಯಿತು. ಜವಾಬ್ದಾರಿಯುತ ಸ್ಥಾನದಲ್ಲಿರುವ ಅಧಿಕಾರಿಗಳ ಈ ಬೇಜವಾಬ್ದಾರಿತನವನ್ನು ರೈತ ನಾಯಕರು ತೀವ್ರವಾಗಿ ಖಂಡಿಸಿದರು.
ಗ್ರಾಮದಲ್ಲಿ ತಕ್ಷಣವೇ ನೀರಿನ ಪೂರೈಕೆ ಆರಂಭಿಸಬೇಕು ಮತ್ತು ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು ಎಂದು ರೈತರು ಆಗ್ರಹಿಸಿದ್ದಾರೆ. ಒಂದು ವೇಳೆ ಮುಂದಿನ ಎರಡು ದಿನಗಳಲ್ಲಿ ನೀರಿನ ಸಮಸ್ಯೆಗೆ ಯೋಗ್ಯ ಪರಿಹಾರ ಸಿಗದಿದ್ದರೇ, ಬೀದಿಗಿಳಿದು ಉಗ್ರ ಹೋರಾಟ ಮಾಡುವುದಾಗಿ ರೈತ ಸಂಘಟನೆಗಳು ಎಚ್ಚರಿಕೆ ನೀಡಿವೆ. ಕೂಡಲೇ ಕರ್ತವ್ಯ ಲೋಪ ಎಸಗಿದ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಬೇಕು ಹಾಗೂ ಗ್ರಾಮಸ್ಥರ ದಾಹ ತಣಿಸಲು ಜಿಲ್ಲಾಡಳಿತ ಮುಂದಾಗಬೇಕೆಂದು ಸಂಘಟನೆಯ ಪ್ರಮುಖರು ಒತ್ತಾಯಿಸಿದ್ದಾರೆ.
