ಶ್ರೀ ಬಸವೇಶ್ವರ ವಿವಿಧೋದ್ದೇಶಗಳ ಸೌಹಾರ್ಧ ಸಹಕಾರಿ ನಿಯಮಿತದ ಅಧ್ಯಕ್ಷ ರಾಜನಗೌಡಾ ರಾವಸಾಹೇಬ ಪಾಟೀಲ ಸೇರಿದಂತೆ ನಿರ್ದೇಶಕರು ಸಾರ್ವಜನಿಕರಿಂದ ನೂರು ಕೋಟಿಗಿಂತಲೂ ಅಧಿಕ ಹಣ ಸಂಗ್ರಹಿಸಿ ಠೇವಣಿದಾರರಿಗೆ ವಂಚನೆ ನಡೆಸಿದ್ದಾರೆ ಎಂದು ಆರೋಪಿಸಿ ಶನಿವಾರ ಠೇವಣಿದಾರರು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.


ಠೇವಣಿದಾರರು ಬೆಳಗಾವಿ ಜಿಲ್ಲಾ ಗ್ರಾಹಕರ ನ್ಯಾಯಾಲಯದಲ್ಲಿ ಹಲವು ಪ್ರಕರಣಗಳನ್ನು ದಾಖಲಿಸಿ, ತಮ್ಮ ಪರವಾಗಿ ಆದೇಶಗಳನ್ನು ಪಡೆಯಲಾಗಿದೆ. ಆದಾಗ್ಯೂ, ನ್ಯಾಯಾಲಯದ ಆದೇಶಗಳನ್ನು ಆರೋಪಿಗಳು ಪಾಲನೆ ಮಾಡಿಲ್ಲ ಎಂದು ದೂರಿದ್ದಾರೆ.
ನ್ಯಾಯಾಲಯವು ಪ್ರಕರಣಗಳ ವಿಚಾರಣೆಯ ವೇಳೆ ಆರೋಪಿಗಳನ್ನು ಹಾಜರುಪಡಿಸುವಂತೆ ಚಿಕ್ಕೋಡಿ ಪೊಲೀಸ್ ಠಾಣೆ ಹಾಗೂ ಬೆಳಗಾವಿ ಎ.ಪಿ.ಎಮ್.ಸಿ ಪೊಲೀಸ್ ಠಾಣೆಗಳಿಗೆ ಬಂಧನ ವಾರಂಟ್ಗಳನ್ನು ಜಾರಿ ಮಾಡಿತ್ತು. ಇದರಲ್ಲಿ ಕ್ರಿಮಿನಲ್ ಕೇಸ್ ನಂ. 404, 23 ಸೇರಿದಂತೆ ಹಲವು ಪ್ರಕರಣಗಳು ಒಳಗೊಂಡಿವೆ.ಆದರೆ, ಕಳೆದ ಆರು ತಿಂಗಳಿನಿಂದ ಪೊಲೀಸರು ಆರೋಪಿಗಳನ್ನು ಪತ್ತೆಹಚ್ಚಲು ವಿಫಲರಾಗಿದ್ದು, “ಆರೋಪಿಗಳು ಸಿಗುತ್ತಿಲ್ಲ” ಎಂದು ನ್ಯಾಯಾಲಯಕ್ಕೆ ವರದಿ ಸಲ್ಲಿಸುತ್ತಿದ್ದಾರೆ. ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ ನ್ಯಾಯಾಲಯ, ಚಿಕ್ಕೋಡಿ ಪೊಲೀಸ್ ಠಾಣೆಯವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವಂತೆ ಸೂಚಿಸಿದೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ಎನ್.ಆರ್.ಲಾತೂರ್, ಜ್ಯೋತಿ ಪಾಟೀಲ್, ರೂಪೇಶ್ ಲಾತೂರು, ಶೀತಲ್ ಬಿಲಾವರ, ಕಾಜಲ್ ನಾಯಕ್, ಕೀರ್ತಿ ಕಾಂಬಳೆ, ಸುಭಾಷ್ ಬಾಗೇವಾಡಿ, ಕಾಜಮೀಲ್ ಡಾಯಸ್ , ಅಂಜಲಿದೇವಿ ಢವಳೇಶ್ವರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
