ಬೆಳಗಾವಿ ನಗರದ ಆಟೋ ಚಾಲಕರಿಗೆ ಈಗೊಂದು ಸಿಹಿ ಸುದ್ದಿ ಇದೆ. ಕಳೆದ ಕೆಲವು ದಿನಗಳಿಂದ ಎದುರಾಗಿದ್ದ ಆಟೋ ಎಲ್ಪಿಜಿ ಗ್ಯಾಸ್ ಕೊರತೆಯನ್ನ ನೀಗಿಸಲು ಜಿಲ್ಲಾಡಳಿತ ಈಗ ಮುಂದಾಗಿದೆ. ಈ ಕುರಿತು ಖುದ್ದು ಜಿಲ್ಲಾಧಿಕಾರಿಗಳೇ ಮಾಹಿತಿ ನೀಡಿದ್ದು, ಆಟೋ ಚಾಲಕರ ಸಂಕಷ್ಟಕ್ಕೆ ಶೀಘ್ರದಲ್ಲೇ ಪರಿಹಾರ ಸಿಗಲಿದೆ.

ಇಂದು ಬೆಳಗಾವಿಯಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಮೊಹ್ಮದ್ ರೋಷನ್ ಅವರು, ಆಟೋ ಎಲ್.ಪಿ.ಜಿ ದೊರೆಯದೇ ಉಂಟಾದ ಸಮಸ್ಯೆಯನ್ನು ಬಗೆಹರಿಸಲು ಆಟೋ ಚಾಲಕರು ಮನವಿಯನ್ನು ಮಾಡಿದ್ದರು. ನಗರದಲ್ಲಿ 7 ಸಿ.ಎನ್.ಜಿ ಪಂಪ್’ಗಳಿವೆ. ಅಲ್ಲಿ ಸರಬರಾಜುಗೆ ಯಾವುದೇ ತೊಂದರೆಯಿಲ್ಲ. ಆದರೇ ಆಟೋ ಎಲ್.ಪಿ.ಜಿಗೆ ಸಂಬಂಧಿಸಿದಂತೆ ನಗರದಲ್ಲಿ 6 ಪಂಪ್’ಗಳಿವೆ. ಎಚ್.ಪಿ ಪಂಪ್’ನಲ್ಲಿ ಯಾವುದೇ ತೊಂದರೆಯಿಲ್ಲ. ಜಿಯೋ ಮತ್ತು ಗೋ ಗ್ಯಾಸ್ ಅವರದ್ದು ಖಾಸಗಿ ಪಂಪ್’ಗಳಿದ್ದು, ಸ್ವಲ್ಪ ಸರಬರಾಜು ಕೊರತೆಯನ್ನು ಎದುರಿಸುತ್ತಿದ್ದಾರೆ. ಆಟೋ ಎಲ್.ಪಿ.ಜಿ ಸಮಸ್ಯೆಯನ್ನು ನಿಗಿಸಲು ಮಲ್ಲಿಕಾರ್ಜುನ ಕಲಾದಗಿ ಅವರನ್ನು ಜಿಲ್ಲಾಮಟ್ಟದಲ್ಲಿ ನೋಡಲ್ ಅಧಿಕಾರಿಯನ್ನು ನೇಮಿಸಲಾಗಿದೆ. ಶೀಘ್ರದಲ್ಲೇ ಅವರು ಸಭೆಯನ್ನು ಕರೆಯಲಿದ್ದು, ಸಮಸ್ಯೆಗಳನ್ನು ಪರಿಹರಿಸಲು ಪ್ರಯತ್ನಿಸಲಿದ್ದಾರೆ ಎಂದರು.
ಇನ್ನು ಕಮರ್ಷಿಯಲ್ ಎಲ್.ಪಿ.ಜಿ ಗೆ ಸಂಬಂಧಿಸಿದಂತೆ ದಿನಕ್ಕೆ 700 ಸಿಲಿಂಡರ್ ನೀಡಲಾಗುತ್ತಿದೆ. ಸಣ್ಣ ವ್ಯಾಪಾರಿಗಳ ಸಮಸ್ಯೆಯನ್ನು ಕೂಡ ಪ್ರಯತ್ನಿಸಲಾಗುತ್ತಿದೆ. ಈಗಾಗಲೇ ಹೊಟೇಲ್ ಅಸೋಸಿಯೇಷನ್ ಜೊತೆ ಮಾತುಕತೆಯನ್ನು ನಡೆಸಲಾಗಿದೆ. ಹೊಟೇಲ್ ವ್ಯವಸಾಯದವರು ಪರ್ಯಾಯ ವ್ಯವಸ್ಥೆಯನ್ನು ಮಾಡಿಕೊಂಡಿದ್ದು, ಅತಿಯಾದ ತೊಂದರೆ ಸದ್ಯಕ್ಕಿಲ್ಲ ಎಂದರು.
