ಬೆಳಗಾವಿಯ ಪ್ರೇಕ್ಷಣೀಯ ಸ್ಥಳಗಳಲ್ಲಿ ಒಂದಾದ ಕೋಟೆ ಕೆರೆ ಇಂದು ಸ್ಮಶಾನ ಸದೃಶವಾಗಿದೆ. ಅಧಿಕಾರಿಗಳ ಮೌನ ಮತ್ತು ನಿರ್ಲಕ್ಷ್ಯದಿಂದಾಗಿ ಕೆರೆಯ ನೀರು ಕಲುಷಿತಗೊಂಡು ಸಾವಿರಾರು ಮೀನುಗಳು ಸಾವನ್ನಪ್ಪಿವೆ. ಕೆಟ್ಟ ವಾಸನೆಯಿಂದಾಗಿ ಪ್ರಾತಃಕಾಲದ ವಾಯುವಿಹಾರಿಗಳು ಮತ್ತು ಸ್ಥಳೀಯ ನಾಗರಿಕರು ಮೂಗು ಮುಚ್ಚಿಕೊಂಡು ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದ್ದು, ಸಂಬಂಧಿಸಿದ ಇಲಾಖೆಯ ವಿರುದ್ಧ ಜನರು ತೀವ್ರ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ

ಬೆಳಗಾವಿಯ ಐತಿಹಾಸಿಕ ಕೋಟೆ ಕೆರೆ ಇಂದು ಅಭಿವೃದ್ಧಿಯ ಬದಲು ಅವ್ಯವಸ್ಥೆಯ ಆಗರವಾಗಿದೆ. ಇತ್ತೀಚೆಗೆ ಸುರಿದ ಭಾರಿ ಮಳೆಗೆ ಚರಂಡಿಯ ಕೊಳಚೆ ನೀರು ನೇರವಾಗಿ ಕೆರೆಗೆ ನುಗ್ಗಿದ್ದು, ವಿಷಕಾರಿ ನೀರು ಸೇವಿಸಿದ ಜಲಚರಗಳು ಗುಂಪು ಗುಂಪಾಗಿ ಸಾವನ್ನಪ್ಪುತ್ತಿವೆ. ಇದರಿಂದಾಗಿ ಕೆರೆಯ ಸುತ್ತಮುತ್ತಲ ಪ್ರದೇಶದಲ್ಲಿ ವಿಪರೀತ ದುರ್ವಾಸನೆ ಹರಡುತ್ತಿದ್ದು, ಸಾರ್ವಜನಿಕರ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುವ ಭೀತಿ ಎದುರಾಗಿದೆ.
ಕೋಟೆ ಕೆರೆಯನ್ನು ಸರಿಯಾಗಿ ನಿರ್ವಹಿಸುತ್ತಿಲ್ಲ. ನೀರು ಕಲುಷಿತಗೊಂಡು ಮೀನುಗಳು ಸಾವನ್ನಪ್ಪಿದ್ದು, ಕೆಟ್ಟ ವಾಸನೆ ಬೀರುತ್ತಿದೆ. ನಗರದಲ್ಲಿ ವಿವಿಧ ಉದ್ಯಾನಗಳನ್ನು ಅಭಿವೃದ್ಧಿಪಡಿಸಲಾಗಿದೆ. ಅದೇ ರೀತಿ ಇದನ್ನು ಕೂಡ ಅಭಿವೃದ್ಧಿಪಡಿಸಬೇಕು. ವಾಕಿಂಗ್ ಟ್ಯಾಕ್ ಎಲ್ಲ ಹಾಳಾಗಿ ಹೋಗಿದೆ. ಶಾಸಕರು ಮತ್ತು ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಇತ್ತ ಗಮನ ಹರಿಸಿ ಸಮಸ್ಯೆಯನ್ನು ಪರಿಹರಿಸಬೇಕೆಂದು ಸ್ಥಳೀಯರು ಆಗ್ರಹಿಸಿದರು.
ಮೊನ್ನೆ ಸುರಿದ ಭಾರಿ ಮಳೆಗೆ ಚರಂಡಿಯ ಕೊಳಚೆ ನೀರು, ಕೋಟೆ ಕೆರೆಗೆ ಸೇರಿದ್ದು, ಇದರಿಂದ ಜಲಚರಗಳ ಮಾರಣಹೋಮವಾಗಿದೆ. ಸ್ಥಳದಲ್ಲಿ ದುರ್ವಾಸನೆ ಬೀರುತ್ತಿದ್ದು, ಜನರಿಗೆ ಓಡಾಡಲೂ ತೊಂದರೆಯಾಗುತ್ತಿದೆ. ಕೂಡಲೇ ಈ ಸಮಸ್ಯೆಯನ್ನು ಪರಿಹರಿಸಬೇಕು. ಜನಪ್ರತಿನಿಧಿಗಳು ಮತ್ತು ಸಂಬಂಧಪಟ್ಟ ಅಧಿಕಾರಿಗಳು ಗಮನ ಹರಿಸಬೇಕೆಂದು ಬೆಳಗಾವಿಗರು ಮನವಿ ಮಾಡಿದ್ದಾರೆ.
