BELAGAVI

ಬೆಳಗಾವಿ: ಬೀಗ ಹಾಕಿದ್ದ ಮನೆಗೆ ಕನ್ನ ; 90 ತೊಲೆ ಚಿನ್ನಾಭರಣ ಲೂಟಿ

Share

ಬೆಳಗಾವಿ: ಶಹಾಪುರದ ಲಕ್ಷ್ಮೀ ರಸ್ತೆಯಲ್ಲಿ ಸಿನಿಮೀಯ ಮಾದರಿಯಲ್ಲೊಂದು ಭಾರಿ ಕಳ್ಳತನ ನಡೆದಿದೆ. ಕುಟುಂಬದವರು ಶುಭಕಾರ್ಯಕ್ಕೆಂದು ಊರಿಗೆ ತೆರಳಿದ್ದನ್ನೇ ಸಂಚು ರೂಪಿಸಿದ ಖದೀಮರು, ಮನೆಯ ಬೀಗ ಮುರಿದು ಸುಮಾರು 90 ತೊಲೆ ಚಿನ್ನವನ್ನು ದೋಚಿದ್ದಾರೆ.
ಬೆಳಗಾವಿಯ ಶಹಾಪುರ ಪೊಲೀಸ್ ಠಾಣಾ ವ್ಯಾಪ್ತಿಯ ಲಕ್ಷ್ಮಿ ರಸ್ತೆಯ ಭಾರತ ನಗರದಲ್ಲಿ ಈ ಘಟನೆ ನಡೆದಿದೆ. ಇಲ್ಲಿನ ನಿವಾಸಿ ಕಲ್ಪನಾ ಮುರಳೀಧರ ಕಾಟವಾ ಎಂಬುವರ ಬಂಗಲೆಯನ್ನು ಗುರಿಯಾಗಿಸಿಕೊಂಡ ಕಳ್ಳರು ಸುಮಾರು 80 ರಿಂದ 90 ತೊಲೆ ಚಿನ್ನದ ಆಭರಣಗಳನ್ನು ದೋಚಿದ್ದಾರೆ. ಮಾರ್ಚ್ 28 ರಂದು ಕಾಟವಾ ಕುಟುಂಬದವರು ಹುಬ್ಬಳ್ಳಿಯಲ್ಲಿ ನಡೆಯುತ್ತಿದ್ದ ಕೌಟುಂಬಿಕ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಮನೆಗೆ ಬೀಗ ಹಾಕಿ ತೆರಳಿದ್ದರು. ಗುರುವಾರ ಮಧ್ಯಾಹ್ನ ಮನೆಗೆ ವಾಪಸ್ಸಾದಾಗ ಕಳ್ಳತನದ ಪ್ರಕರಣ ಬೆಳಕಿಗೆ ಬಂದಿದ್ದು, ಇಡೀ ಕುಟುಂಬ ಕಂಗೆಟ್ಟಿದೆ.

ಮನೆಯವರು ಇಲ್ಲದ ಸಮಯವನ್ನೇ ಕಾದು ಕುಳಿತಿದ್ದ ಖದೀಮರು, ಬಾಗಿಲು ಮುರಿದು ಒಳನುಗ್ಗಿದ್ದಾರೆ. ಮನೆಯಲ್ಲಿದ್ದ ಕಪಾಟು ಮತ್ತು ಡ್ರಾಯರ್‌ಗಳನ್ನು ಜಾಲಾಡಿ, ಲಾಕರ್‌ನಲ್ಲಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣಗಳನ್ನು ಹೊತ್ತೊಯ್ದಿದ್ದಾರೆ.

 

ವಿಷಯ ತಿಳಿಯುತ್ತಿದ್ದಂತೆಯೇ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಡಿಸಿಪಿ ನಾರಾಯಣ ಬರಮನಿ ಹಾಗೂ ಅಪರಾಧ ವಿಭಾಗದ ಡಿಸಿಪಿ ನಿರಂಜನರಾಜ ಅರಸ್ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸದ್ಯ ಶ್ವಾನದಳ ಮತ್ತು ಬೆರಳಚ್ಚು ತಜ್ಞರ ಸಹಾಯದೊಂದಿಗೆ ಶಹಾಪುರ ಪೊಲೀಸರು ತನಿಖೆ ಚುರುಕುಗೊಳಿಸಿದ್ದು, ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.

Tags:

error: Content is protected !!