ಗ್ರಾಹಕರ ಅಚ್ಚುಮೆಚ್ಚಿನ ಹಾಗೂ ವಿಶ್ವಾಸಾರ್ಹ ಸಹಕಾರಿ ಸಂಸ್ಥೆಯಾಗಿ ಬೆಳವಣಿಗೆ ಕಂಡಿರುವ ಜೊಲ್ಲೆ ಗ್ರೂಪ್ ಅಂಗಸಂಸ್ಥೆಯಾದ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಯಕ್ಸಂಬಾ ಪಟ್ಟಣದ ಶ್ರೀ ಬೀರೇಶ್ವರ ಕೋ-ಆಪ್ ಕ್ರೆಡಿಟ್ ಸೊಸಾಯಿಟಿ (ಮಲ್ಟಿ ಸ್ಟೇಟ್) ಪ್ರಸಕ್ತ ಆರ್ಥಿಕ ವರ್ಷದ ಅಂತ್ಯಕ್ಕೆ 5183 ಕೋಟಿ ರೂ. ಠೇವಣಿ ಸಂಗ್ರಹಿಸಿ 51.04 ಕೋಟಿ ರೂ. ನಿವ್ವಳ ಲಾಭ ಗಳಿಸಿದೆ ಎಂದು ಜೊಲ್ಲೆ ಗ್ರೂಪ್ ಸಂಸ್ಥಾಪಕರು ಹಾಗೂ ಬೆಳಗಾವಿ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಅಣ್ಣಾಸಾಹೇಬ ಜೊಲ್ಲೆ ತಿಳಿಸಿದ್ದಾರೆ.
ನಿಪ್ಪಾಣಿಯ ಹಾಲಸಿಧ್ದನಾಥ ಸಕ್ಕರೆ ಕಾರ್ಖಾನೆಯ ಸಬಾಭವನದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಕರ್ನಾಟಕ, ಮಹಾರಾಷ್ಟ್ರ ಮತ್ತು ಗೋವಾ ರಾಜ್ಯಗಳಲ್ಲಿ ಒಟ್ಟು 233 ಶಾಖೆಗಳ ಮೂಲಕ ಕಾರ್ಯನಿರ್ವಹಿಸುತ್ತಿದ್ದು, ದಕ್ಷಿಣ ಭಾರತದಲ್ಲೇ ಪ್ರಮುಖ ಸಹಕಾರಿ ಸಂಸ್ಥೆಯಾಗಿ ಹೊರಹೊಮ್ಮಿದೆ ಎಂದು ಹೇಳಿದರು.
ಸಂಸ್ಥೆಯು ಗ್ರಾಹಕರ ವಿಶ್ವಾಸ ಹಾಗೂ ಸಿಬ್ಬಂದಿಗಳ ಪ್ರಾಮಾಣಿಕತೆಯಿಂದ ಉತ್ತಮ ಸಾಧನೆ ಮಾಡುತ್ತಿದೆ. ಪ್ರಸ್ತುತ ಸಂಸ್ಥೆಯಲ್ಲಿ 4.45 ಲಕ್ಷ ಸದಸ್ಯರಿದ್ದು, 37.21 ಕೋಟಿ ರೂ. ಷೇರು ಬಂಡವಾಳ, 244.25 ಕೋಟಿ ರೂ. ಕಾಯ್ದಿಟ್ಟ ಹಾಗೂ ಇತರೆ ನಿಧಿಗಳು, 5183.08 ಕೋಟಿ ರೂ. ಠೇವಣಿ, 3838.84 ಕೋಟಿ ರೂ. ಸಾಲ ಮತ್ತು ಮುಂಗಡಗಳು, 1487.90 ಕೋಟಿ ರೂ. ಬ್ಯಾಂಕ್ ಬ್ಯಾಲನ್ಸ್ ಮತ್ತು ಹೂಡಿಕೆ, 5839.26 ಕೋಟಿ ರೂ. ವರ್ಕಿಂಗ್ ಕ್ಯಾಪಿಟಲ್ ಹೊಂದಿದೆ ಎಂದು ವಿವರಿಸಿದರು.
ಸಹಕಾರ, ಕೃಷಿ, ಹಣಕಾಸು, ಶಿಕ್ಷಣ, ಹೈನುಗಾರಿಕೆ ಹಾಗೂ ವ್ಯಾಪಾರ ಕ್ಷೇತ್ರಗಳಲ್ಲಿ ಜೊಲ್ಲೆ ಗ್ರೂಪ್ ಸಕ್ರಿಯವಾಗಿದ್ದು, ಹಸಿರು ಶಕ್ತಿ ಉತ್ಪಾದನೆ, ಆರೋಗ್ಯ ಸೇವೆ, ಕಟ್ಟಡ ನಿರ್ಮಾಣ ಹಾಗೂ ಐಟಿಸಿ ಸಹಭಾಗಿತ್ವದಲ್ಲಿ ‘ವೆಲ್‌ಕಮ್’ ಫೈವ್ ಸ್ಟಾರ್ ಹೋಟೆಲ್ ಸ್ಥಾಪನೆ ಸೇರಿದಂತೆ ಹಲವು ಯೋಜನೆಗಳ ಮೂಲಕ ಅಭಿವೃದ್ಧಿಗೆ ಕೊಡುಗೆ ನೀಡುತ್ತಿದೆ ಎಂದರು.
ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷ ಅಪ್ಪಾಸಾಹೇಬ ಜೊಲ್ಲೆ, ಉಪಾಧ್ಯಕ್ಷ ಆನಂದ ಪಾಟೀಲ, ನಿರ್ದೇಶಕರಾದ ಸಿದ್ರಾಮ ಗಡದೆ, ಯಾಸಿನ್ ತಾಂಬೋಳೆ, ಶ್ರೀನಿವಾಸ ಕರಾಳೆ, ನಿಂಗಪ್ಪ ಖೋಕಲೆ, ಕಾಶಿನಾಥ ಕಾಮಟೆ, ಅಪ್ಪಾಸಾಹೇಬ ಚೌಗಲಾ, ದತ್ತಾತ್ರಯ ಪಾಟೀಲ, ಸದಾನಂದ ಹಾಲಿಂಗಾಳಿ, ಚೇತನ ದೇಶಪಾಂಡೆ, ವಿಭಾವರಿ ಖಾಂಡಕೆ, ಪ್ರಭಾರಿ ವ್ಯವಸ್ಥಾಪಕ ಬಹದ್ದೂರ್ ಗುರವ್, ಡಿಜಿಎಂ ಮಹಾದೇವ ಮಂಗವಾಟೆ, ರಮೇಶ್ ಕುಂಬಾರ, ಸುರೇಶ್ ಮಾನೆ, ಶಿವಪುತ್ರ ಡಬ್ಬ ಸೇರಿದಂತೆ ಇತರರು ಉಪಸ್ಥಿತರಿದ್ದರು.
