ಬಾಗಲಕೋಟೆ ಉಪಚುನಾವಣೆಯ ಪ್ರಚಾರ ಕಣದಲ್ಲಿ ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಸೋಲಿನ ಭೀತಿಯಿಂದ ಕಂಗೆಟ್ಟಿರುವ ಬಿಜೆಪಿ ನಾಯಕರು ಸುಳ್ಳು ಭರವಸೆಗಳನ್ನು ನೀಡುತ್ತಿದ್ದಾರೆ ಮತ್ತು ಪಕ್ಷದಿಂದ ಹೊರಹಾಕಲ್ಪಟ್ಟವರನ್ನು ಮರಳಿ ಕರೆತಂದು ಪ್ರಚಾರ ಮಾಡಿಸುವ ಅನಿವಾರ್ಯತೆಗೆ ಸಿಲುಕಿದ್ದಾರೆ ಎಂದು ಸಿಎಂ ಲೇವಡಿ ಮಾಡಿದರು.

ಬಾಗಲಕೋಟೆಯ ಹೆಲಿಪ್ಯಾಡ್ಗೆ ಇಂದು ಮಧ್ಯಾಹ್ನ ಆಗಮಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಚಿವರಾದ ಎಚ್.ಕೆ. ಪಾಟೀಲ್, ರಾಮಲಿಂಗ ರೆಡ್ಡಿ ಹಾಗೂ ಆರ್.ಬಿ. ತಿಮ್ಮಾಪುರ ಸಾಥ್ ನೀಡಿದರು. ದಾವಣಗೆರೆಯಿಂದ ಹೆಲಿಕಾಪ್ಟರ್ ಮೂಲಕ ಆಗಮಿಸಿದ ಸಿಎಂ, ಮೊದಲು ಪ್ರಸಿದ್ಧ ಮುಚಖಂಡಿ ವೀರಭದ್ರೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ದೇವರ ದರ್ಶನದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “ಬಿಜೆಪಿಗೆ ಯಾವುದೇ ನೈತಿಕತೆ ಇಲ್ಲ. ಸೋಲುವ ಭಯದಿಂದಾಗಿ ಅವರು ಹತಾಶರಾಗಿದ್ದಾರೆ” ಎಂದು ಟೀಕಿಸಿದರು.

ಸಚಿವ ವಿ. ಸೋಮಣ್ಣ ಅವರ ಹೇಳಿಕೆಗಳಿಗೆ ಕಟುವಾಗಿ ಪ್ರತಿಕ್ರಿಯಿಸಿದ ಸಿಎಂ, ಕೆಲಸವಿಲ್ಲದ ಮಂತ್ರಿಯಾಗಿರುವ ಸೋಮಣ್ಣ ಅವರಿಗೆ ನಮ್ಮ ಸ್ಥಾನದ ಬಗ್ಗೆ ಡೆಡ್ಲೈನ್ ನೀಡಲು ಯಾವುದೇ ಹಕ್ಕಿಲ್ಲ, ಅವರು ಕಾಂಗ್ರೆಸ್ ಹೈಕಮಾಂಡ್ ಅಲ್ಲ ಎಂದು ಕಿಡಿಕಾರಿದರು. ಚುನಾವಣಾ ಪ್ರಚಾರಕ್ಕೆ ಸಮಯವಿಲ್ಲದ ಬಿಜೆಪಿ ನಾಯಕರು ಕೇವಲ ಸುಳ್ಳು ಪ್ರಚಾರದಲ್ಲಿ ತೊಡಗಿದ್ದಾರೆ. ಆದರೆ ಜನ ಸಾಮಾನ್ಯರು ಗ್ಯಾರಂಟಿ ಯೋಜನೆಗಳ ಲಾಭ ಪಡೆಯುತ್ತಿದ್ದು, ಉಪಚುನಾವಣೆಯ ಎರಡೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಜಯಭೇರಿ ಬಾರಿಸಲಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದರು.

ಹೈಕಮಾಂಡ್ ತೆಗೆದುಕೊಳ್ಳುವ ಯಾವುದೇ ತೀರ್ಮಾನಕ್ಕೆ ನಾವು ಬದ್ಧರಾಗಿದ್ದೇವೆ ಎಂದು ಸ್ಪಷ್ಟಪಡಿಸಿದ ಮುಖ್ಯಮಂತ್ರಿಗಳು, ಬಿಜೆಪಿ ನಾಯಕರ ಸುಳ್ಳುಗಳಿಗೆ ಮತದಾರರು ಈ ಬಾರಿ ಮರಳಾಗುವುದಿಲ್ಲ ಎಂದು ಪ್ರತಿಪಾದಿಸಿದರು. ಮುಚಖಂಡಿ ವೀರಭದ್ರೇಶ್ವರನ ಆಶೀರ್ವಾದದೊಂದಿಗೆ ಎರಡನೇ ಸುತ್ತಿನ ಮತಭೇಟೆಯನ್ನು ಯಶಸ್ವಿಯಾಗಿ ಮುಂದುವರಿಸುವುದಾಗಿ ಅವರು ತಿಳಿಸಿದರು.
