ಬಾಗಲಕೋಟೆ ಉಪಚುನಾವಣೆಯ ಬಿಜೆಪಿ ಪ್ರಚಾರ ಕಣದಲ್ಲಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅಕ್ಷರಶಃ ಗುಡುಗಿದ್ದಾರೆ. ಪಕ್ಷದ ಅಭ್ಯರ್ಥಿ ಪರ ಮತಯಾಚನೆಗೆ ಬಂದು, ವೇದಿಕೆ ಮೇಲಿದ್ದ ನಾಯಕರ ಸಮ್ಮುಖದಲ್ಲೇ “ಮುಂದಿನ ಮುಖ್ಯಮಂತ್ರಿ ನಾನೇ” ಎನ್ನುವ ಮೂಲಕ ಬಿಜೆಪಿಗೆ ಅಚ್ಚರಿಯ ಟಾಂಗ್ ನೀಡಿದ್ದಾರೆ.
ಬಾಗಲಕೋಟೆಯ ಪಂಚಮಸಾಲಿ ಸಮುದಾಯದ ಬೃಹತ್ ಸಭೆಯಲ್ಲಿ ಮಾತನಾಡಿದ ಯತ್ನಾಳ್, ತಮ್ಮ ವಿಶಿಷ್ಟ ಶೈಲಿಯ ಬ್ಯಾಟಿಂಗ್ ಮೂಲಕ ಸುದ್ದಿಯಾಗಿದ್ದಾರೆ. “2028ರ ಚುನಾವಣೆಯಲ್ಲಿ ನಾನೇ ಮುಖ್ಯಮಂತ್ರಿಯಾಗುವುದು ಖಚಿತ. ಅಂದು ಜೆಡಿಎಸ್ನ 40 ಸೀಟು ಗೆದ್ದು ಎಚ್.ಡಿ. ಕುಮಾರಸ್ವಾಮಿ ಸಿಎಂ ಆಗುವ ಕನಸು ಕಂಡಂತೆ, ನಾನು ಕೂಡ ಅತಿ ಹೆಚ್ಚು ಸ್ಥಾನ ಗೆದ್ದು ಅಧಿಕಾರ ಹಿಡಿಯುತ್ತೇನೆ” ಎಂದು ಭವಿಷ್ಯ ನುಡಿದರು. ಇದೇ ವೇಳೆ ವೇದಿಕೆಯಲ್ಲಿದ್ದ ತಮ್ಮ ರಾಜಕೀಯ ವೈರಿ ಮುರುಗೇಶ್ ನಿರಾಣಿ ಅವರನ್ನು ಕಂಡು, “ನೋಡಿ, ನಾವು ಎಷ್ಟೇ ಜಗಳವಾಡಿದ್ದರೂ ಈಗ ಒಂದೇ ವೇದಿಕೆಯಲ್ಲಿದ್ದೇವೆ. ಮೇಟ್ ಮೇಟ್ನಲ್ಲಿ ಹೊಡೆದಾಡಿಕೊಂಡವರೇ ಒಂದಾಗಿದ್ದೇವೆ, ನೀವು ಒಂದಾಗಿ ಮತ ನೀಡಿ” ಎಂದು ಮಾರ್ಮಿಕವಾಗಿ ಹೇಳಿದರು.
ಯತ್ನಾಳ್ ಅವರ ಈ ಮಾತಿಗೆ ಪಕ್ಕದಲ್ಲೇ ಕುಳಿತಿದ್ದ ಮುರುಗೇಶ್ ನಿರಾಣಿ, ಸಿಸಿ ಪಾಟೀಲ್ ಹಾಗೂ ಅರವಿಂದ ಬೆಲ್ಲದ್ ಬಿದ್ದು ಬಿದ್ದು ನಕ್ಕ ಪ್ರಸಂಗ ಜರುಗಿತು.
