ಬೆಳಗಾವಿಯಲ್ಲಿ ಈ ಬಾರಿ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ 135ನೇ ಜಯಂತಿಯನ್ನು ಅತ್ಯಂತ ಸ್ಮರಣೀಯವಾಗಿ ಆಚರಿಸಲು ಮಹಾನಗರ ಪಾಲಿಕೆ ಸಜ್ಜಾಗಿದೆ. ಕೇವಲ ಮೆರವಣಿಗೆಯಷ್ಟೇ ಅಲ್ಲದೆ, ಶೈಕ್ಷಣಿಕ ಕ್ರಾಂತಿಯ ಹೊಸ ಮೈಲಿಗಲ್ಲಿಗೆ ಈ ಬಾರಿ ಮಹಾನಗರ ಪಾಲಿಕೆ ಮುನ್ನುಡಿ ಬರೆಯುತ್ತಿದೆ. ಇಂದು ಮಹಾಪೌರರ ಅಧ್ಯಕ್ಷತೆಯಲ್ಲಿ ಡಾ. ಅಂಬೇಡ್ಕರ್ ಜಯಂತಿಗೆ ಸಂಬಂಧಿಸಿದಂತೆ ಇಂದು ಪೂರ್ವಭಾವಿ ಸಭೆ ನಡೆಯಿತು.

ಬೆಳಗಾವಿ ಮಹಾನಗರ ಪಾಲಿಕೆಯ ಮಹಾಪೌರ ಪ್ರೀತಿ ಕಾಮಕರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಜಯಂತಿ ಆಚರಣೆಯ ನೀಲನಕ್ಷೆ ಸಿದ್ಧಪಡಿಸಲಾಯಿತು. ಏಪ್ರಿಲ್ 12ರಿಂದ ಆರಂಭವಾಗುವ ಈ ಸಂಭ್ರಮದಲ್ಲಿ ಕ್ಯಾಂಪ್ನ ಅಂಬೇಡ್ಕರ್ ಮಾರ್ಗದಿಂದ ಭವ್ಯ ಮೆರವಣಿಗೆ ಹೊರಡಲಿದ್ದು, ರಾಣಿ ಚನ್ನಮ್ಮ ವೃತ್ತದಲ್ಲಿ ಸಮಾರೋಪಗೊಳ್ಳಲಿದೆ. ಸುಮಾರು 25,000 ಜನರಿಗೆ ಊಟದ ವ್ಯವಸ್ಥೆ, ಆಕರ್ಷಕ ಟ್ಯಾಬ್ಲೋಗಳಿಗೆ ಬಹುಮಾನ ಹಾಗೂ ಯುವಕರಿಗಾಗಿ ಕ್ರಿಕೆಟ್ ಟೂರ್ನಮೆಂಟ್ ಆಯೋಜಿಸುವ ಮೂಲಕ ನಗರವನ್ನು ನೀಲಿಮಯವಾಗಿಸಲು ಪಾಲಿಕೆ ನಿರ್ಧರಿಸಿದೆ.
ಕೇವಲ ಆಚರಣೆಗೆ ಸೀಮಿತವಾಗದೆ ಅಂಬೇಡ್ಕರ್ ಅವರ ‘ಶಿಕ್ಷಣ’ದ ತತ್ವವನ್ನು ಜಾರಿಗೆ ತರಲು ದಲಿತ ಮುಖಂಡ ಮಲ್ಲೇಶ ಚೌಗುಲೆ ಅವರು ಪಾಲಿಕೆಗೆ ಪಂಚಸೂತ್ರಗಳ ಬೇಡಿಕೆ ಇಟ್ಟಿದ್ದಾರೆ. ಪಾಲಿಕೆ ಶಾಲೆಗಳ ಗುಣಮಟ್ಟದ ಮೇಲೆ ‘ವಿಶೇಷ ಆಡಿಟ್’ ನಡೆಸಬೇಕು, ಶಾಲೆಯಿಂದ ಹೊರಗುಳಿದ ಮಕ್ಕಳಿಗಾಗಿ “Back to School Campaign” ಆರಂಭಿಸಬೇಕು ಹಾಗೂ ಬಡ ವಿದ್ಯಾರ್ಥಿಗಳಿಗೆ ಒಂದೇ ಸೂರಿನಡಿ ಸೌಲಭ್ಯ ಸಿಗುವಂತೆ “Single Window System” ಜಾರಿಗೆ ತರಬೇಕು ಎಂಬ ಮಹತ್ವದ ಪ್ರಸ್ತಾವನೆಗಳನ್ನು ಸಭೆಯಲ್ಲಿ ಮಂಡಿಸಲಾಯಿತು. ಬಾಬಾಸಾಹೇಬರು ಬೆಳಗಾವಿಗೆ ಭೇಟಿ ನೀಡಿದ್ದ ಐತಿಹಾಸಿಕ ಸ್ಥಳಗಳನ್ನು ಗುರುತಿಸಿ ಮ್ಯೂಸಿಯಂ ನಿರ್ಮಿಸಬೇಕು ಎಂಬ ಸಲಹೆ ಸಭೆಯಲ್ಲಿ ಕೇಳಿಬಂದಿದೆ. ಇದರೊಂದಿಗೆ ಸಂವಿಧಾನದ ಮೌಲ್ಯಗಳ ಬಗ್ಗೆ ಜಾಗೃತಿ ಮೂಡಿಸಲು “Urban Civic Awareness Program” ಹಾಗೂ ಪಾಲಿಕೆ ಶಾಲೆಗಳನ್ನು “Model Education Zones” ಆಗಿ ಪರಿವರ್ತಿಸುವ ದೀರ್ಘಕಾಲಿಕ ಯೋಜನೆಯನ್ನು ಜಯಂತಿ ದಿನದಂದೇ ಘೋಷಿಸುವಂತೆ ಆಗ್ರಹಿಸಿದರು.
ನಂತರ ನೂತನ ಮಹಾಪೌರರಾದ ಪ್ರೀತಿ ಕಾಮಕರ ಹಾಗೂ ಉಪ ಮಹಾಪೌರ ಹನುಮಂತ ಕೊಂಗಾಲಿ ಅವರಿಗೆ ಹಾಗೂ ಶಾಸಕ ಆಸೀಫ್ ಸೇಠ್ ಅವರಿಗೆ ದಲಿತ ಮುಖಂಡರಿಂದ ಸತ್ಕರಿಸಿ ಗೌರವ ಸಲ್ಲಿಸಲಾಯಿತು.
