ಡೊಳ್ಳು, ಗೊಂಬೆ ಕುಣಿತ ಸೇರಿದಂತೆ ವಿವಿಧ ವಾದ್ಯ ಮೇಳಗಳು, ಹರ ಹರ ಮಹಾದೇವ ಎಂಬ ಜಯಘೋಷ ಕೂಗುತ್ತ, ಎಲ್ಲೆಡೆ ಗುಲಾಲು ಎರಚುತ್ತ ತಾಲೂಕಿನ ಸುಳೇಭಾವಿ ಗ್ರಾಮದ ಶ್ರೀ ಕಲ್ಮೇಶ್ವರ ಭವ್ಯ ರಥೋತ್ಸವ ಸಡಗರ-ಸಂಭ್ರಮದಿಂದ ನೆರವೇರಿತು.
ಶ್ರೀ ಕಲ್ಮೇಶ್ವರ ಜಾತ್ರಾ ಮಹೋತ್ಸವ ನಿಮಿತ್ತ ನಡೆದ ರಥೋತ್ಸವ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಾಗಿತು. ಸುಡು ಬಿಸಿಲಿನಲ್ಲೂ ಭಕ್ತರು ತೇರನೆಳೆದು ಭಕ್ತ-ಭಾವದಿಂದ ದೇವರ ಕೃಪೆಗೆ ಪಾತ್ರರಾದರು.
ರಥೋತ್ಸವಕ್ಕೆ ಆರತಿ ಬೆಳಗಿ, ಮಂತ್ರ ಪಠಣದೊಂದಿಗೆ ಚಾಲನೆ ನೀಡಲಾಯಿತು. ಪ್ರತಿ ವರ್ಷದಂತೆ ಈ ವರ್ಷವೂ ಅತ್ಯಂತ ಸಂಭ್ರಮದಿಂದ ನಡೆದ ಭವ್ಯ ರಥೋತ್ಸವ ವೇಳೆ ಜನರು ಗುಲಾಲು ಎರಚುತ್ತ ರಥ ಎಳೆದರು. ಭಕ್ತರು ರಥಕ್ಕೆ ಉತ್ತತ್ತಿ, ಬತ್ತಾಸು ಎರಚಿ ಭಕ್ತಿ ಭಾವ ಮೆರೆದರು.
ರಥೋತ್ಸವ ಮೆರವಣಿಗೆ ಶ್ರೀ ಕಲ್ಮೇಶ್ವರ ದೇವಸ್ಥಾನ ಆವರಣದಿಂದ ಆರಂಭಗೊಂಡು ಹೊಸಕೇರಿ ಗಲ್ಲಿ, ಕಮ್ಮಾರ ಗಲ್ಲಿ, ಲಕ್ಷ್ಮೀ ಗಲ್ಲಿ, ವಾಡೇ ಗಲ್ಲಿ, ಹಳಕೇರಿ ಗಲ್ಲಿ, ಘಾಟೋಳ ಗಲ್ಲಿ ಮಾರ್ಗದ ಮೂಲಕ ಬಜಾರ ಗಲ್ಲಿವರೆಗೆ ಸಂಚರಿಸಿತು. ಭಕ್ತರು ರಥಕ್ಕೆ ನೀರು ಹಾಕಿ ನೈವೇದ್ಯ ತೋರಿಸಿದರು. ನಂತರ ಸಮಜೆ ಹೊತ್ತಿಗೆ ತೇರು ಗ್ರಾಮದ ಚಾವಡಿ ಬಳಿಯ ಹಳೆಯ ಪಂಚಾಯಿತಿ ಕಟ್ಟಡ ಹತ್ತಿರ ವಾಸ್ತವ್ಯ ಹೂಡಿತು.
ಮೆರವಣಿಗೆ ವೇಳೆ ಚಂದ್ರಶೇಖರ ಹೂಗಾರ ನೇತೃತ್ವದಲ್ಲಿ ವಿಜಯಪುರ ಜಿಲ್ಲೆ ಬಬಲೇಶ್ವರ ತಾಲೂಕಿನ ಸಾರವಾಡ ಗ್ರಾಮದ ಶ್ರೀ ಶಕ್ತಿ ಗೊಂಬೆ ಕುಣಿತ ಹಾಗೂ ಶಂಕರಮ್ಮ ಮುಗಳಿ ನೇತೃತ್ವದಲ್ಲಿ ರಾಮದುರ್ಗದ ಶ್ರೀ ಶಾಕಂಭರಿ ಮಹಿಳಾ ಮಂಡಳದ ಡೊಳ್ಳು ಕುಣಿತ, ಸುಳೇಭಾವಿ ಗ್ರಾಮದ ಬ್ಯಾಂಡ್ ಸೇರಿದಂತೆ ವಿವಿಧ ವಾದ್ಯ ಮೇಳಗಳು ಗಮನಸೆಳೆದವು. ಶ್ರೀ ಕಲ್ಮೇಶ್ವರ ದೇವಸ್ಥಾನ ಟ್ರಸ್ಟ್ ಕಮಿಟಿ ಅಧ್ಯಕ್ಷರು, ಸರ್ವ ಸದಸ್ಯರು ಹಾಗೂ ಪೂಜಾರಿಗಳು ಪಾಲ್ಗೊಂಡಿದ್ದರು.
ಗ್ರಾಮದಲ್ಲಿ ಶ್ರೀ ಕಲ್ಮೇಶ್ವರ ದೇವರ ಪಲ್ಲಕ್ಕಿ ಉತ್ಸವ ನೆರವೇರಿತು. ನಂತರ ರಥವನ್ನು ದೇವಸ್ಥಾನದವರೆಗೆ ಕರೆದುಕೊಂಡು ಹೋಗಲಾಯಿತು. ಸಂಪ್ರದಾಯದಂತೆ ಅಂಬಲಿ ಬಂಡಿ ಕಾರ್ಯಕ್ರಮ ನೆರವೇರಿತು. ಅದೇ ದಿನ ರಾತ್ರಿ 10:30ಕ್ಕೆ ಸಂಗ್ಯಾ ಬಾಳ್ಯಾ ನಾಟಕ ಪ್ರದರ್ಶನವಾಯಿತು.
