ಹನುಮಾನ ನಗರ ರಹಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಪ್ರತಿ ವರ್ಷದಂತೆ ಈ ಬಾರಿಯೂ ಹನುಮಾನ ನಗರದ ಹನುಮಾನ ಮಂದಿರದಲ್ಲಿ ಭಕ್ತಿಭಾವದಿಂದ ಹನುಮಾನ ಜಯಂತಿಯನ್ನು ಆಚರಿಸಲಾಯಿತು. ಆಂಜನೇಯನ ಮೂರ್ತಿಗೆ ವಿಶೇಷ ಅಭಿಷೇಕ, ಅಲಂಕಾರ, ಪೂಜೆ, ಮಹಾ ಆರತಿ ನೆರವೇರಿಸಲಾಯಿತು. ನಂತರ ಸುಮಂಗಲಿಯರಿಂದ ಬಾಲ ಹನುಮನನ್ನು ತೊಟ್ಟಿಲಿಗೆ ಹಾಕಿ ಹನುಮಾನ ಜನ್ಮೋತ್ಸವವನ್ನು ಆಚರಿಸಲಾಯಿತು.

ಪ್ರತಿವರ್ಷದಂತೆ ಈ ಬಾರಿಯೂ ವಿಜೃಂಭಣೆಯಿಂದ ಹನುಮಾನ ಜಯಂತಿಯನ್ನ ಆಚರಿಸಲಾಗುತ್ತಿದೆ. ಸುಮಾರು 7 ವರೆ 8 ಸಾವಿರ ಭಕ್ತರು ದೇವರ ದರ್ಶನ ಪಡೆದು, ಮಹಾಪ್ರಸಾದವನ್ನು ಸ್ವೀಕರಿಸುತ್ತಾರೆ. ಎಲ್ಲರ ಸಹಕಾರದಿಂದ 2008 ರಿಂದ ಹನುಮಾನ ಜಯಂತಿ ಮತ್ತು ಮಹಾಪ್ರಸಾದವನ್ನು ಆಯೋಜಿಸಲಾಗುತ್ತದೆ. ದೇವರಲ್ಲಿ ಈ ಬಾರಿ ಮಧ್ಯಪ್ರಾಚ್ಯದಲ್ಲಿ ಆರಂಭಗೊಂಡಿರುವ ಯುದ್ಧದ ಕಾರ್ಮೋಡ ದೂರಾಗಿ ಶಾಂತಿ ನೆಲೆಸಲಿ ಎಂದು ಆಂಜನೇಯನಲ್ಲಿ ವಿಶೇಷವಾಗಿ ಪ್ರಾರ್ಥಿಸಲಾಗಿದೆ. ಜಗತ್ತಿನ ಜನರಿಗೆ ಸುಖ ಶಾಂತಿ ಸಮೃದ್ಧಿಯನ್ನು ನೀಡಲಿ ಎಂದು ಕಾರ್ಯದರ್ಶಿ ದಿವಾಕರ್ ದೇಶಪಾಂಡೆ ಅವರು ಹಾರೈಸಿದರು.

ಈ ಸಂದರ್ಭದಲ್ಲಿ ಸಾವಿರಾರು ಜನರು ಮಹಾಪ್ರಸಾದವನ್ನು ಸ್ವೀಕರಿಸಿ ಆಂಜನೇಯನ ಕೃಪೆಗೆ ಪಾತ್ರರಾದರು. ಹನುಮಾನ ಜಯಂತಿಯನ್ನು ಯಶಸ್ವಿಗೊಳಿಸಲು ಅಧ್ಯಕ್ಷ ರಾಹುಲ್ ಮೇತ್ರಿ, ಉಪಾಧ್ಯಕ್ಷ ಜಿ.ಎ. ಅಳಗುಂಡಗಿ, ಎಸ್.ಎಸ್. ಪಾವಟೆ, ಎಂ.ವೈ ಪ್ರಭು ಸೇರಿದಂತೆ ಇನ್ನುಳಿದವರು ಶ್ರಮಿಸಿದರು.

