ಬೆಳಗಾವಿಯಲ್ಲಿನ ಮರಾಠಿ ದಿನಪತ್ರಿಕೆಗಳನ್ನು ಬಂದ್ ಮಾಡಬೇಕೆಂದು ಮತ್ತು ಮರಾಠಿ ಪತ್ರಕರ್ತರನ್ನು ಬೆಳಗಾವಿಯಿಂದ ಹೊರ ಹಾಕಬೇಕೆಂದು ಕರ್ನಾಟಕ ರಕ್ಷಣಾ ವೇದಿಕೆ ಶಿವರಾಮೇಗೌಡ ಬಣದ ವತಿಯಿಂದ ಬೆಳಗಾವಿಯಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು. ಹೈಡ್ರಾಮಾ ಉಂಟಾದ ಹಿನ್ನೆಲೆ ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ಪಡೆದ ಘಟನೆ ಕೂಡ ನಡೆಯಿತು.

ಬೆಳಗಾವಿಯಲ್ಲಿ ಕರ್ನಾಟಕದ ರಾಜ್ಯದ ವಿರುದ್ಧ ನಡೆದುಕೊಳ್ಳುತ್ತಿರುವ ಬೆಳಗಾವಿ ಮರಾಠಿ ಪತ್ರಕರ್ತರನ್ನು ಗಡಿ ಪಾರು ಮಾಡಬೇಕೆಂದು ಕರವೇ ಶಿವರಾಮೇಗೌಡ ಬಣದ ಕಾರ್ಯಕರ್ತರು ಗುರುವಾರ ಪ್ರತಿಭಟನೆ ರಾಣಿ ಚನ್ನಮ್ಮ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.

ಬೆಳಗಾವಿಯಲ್ಲಿ ನಾಡದ್ರೋಹಿ ಚಟುವಟಿಕೆ ನಡೆಸಿರುವ ಬೆಳಗಾವಿ ಮರಾಠಿ ಪತ್ರಕರ್ತರ ನಡೆಯನ್ನು ಖಂಡನೀಯ. ರಾಜ್ಯ ಸರಕಾರದ ಸೌಲಭ್ಯವನ್ನು ಕೂಡಲೇ ಹಿಂಪಡೆಯಬೇಕು ಎಂದು ಒತ್ತಾಯಿಸಿದರು. ಇದಕ್ಕೂ ಮುನ್ನ ಮಾತನಾಡಿದ ಕರವೇ ಶಿವರಾಮೇಗೌಡ ಬಣದ ಜಿಲ್ಲಾಧ್ಯಕ್ಷ ವಾಜೀದ್ ಹಿರೇಕೂಡಿ ಅವರು, ಬೆಳಗಾವಿಯ ಮರಾಠಿ ಪತ್ರಕರ್ತರು ಗಡಿ ವಿವಾದದಲ್ಲಿ ನಾಡದ್ರೋಹಿ ಕೆಲಸವನ್ನು ಮಾಡುತ್ತಿದ್ದು, ಮರಾಠಿ ದಿನಪತ್ರಿಕೆಯನ್ನು ಬೆಳಗಾವಿ ಜಿಲ್ಲೆಯಿಂದ ಹೊರ ಹಾಕಬೇಕು. ಬೆಳಗಾವಿಯಲ್ಲಿ ಯಾವುದೇ ಮರಾಠಿ ದಿನಪತ್ರಿಕೆ ಇರಬಾರದು. ಇವು ಬೆಳಗಾವಿಯನ್ನು ಹಾಳು ಮಾಡುವುದರೊಂದಿಗೆ ಕನ್ನಡಿಗರಿಗೆ ಅವಮಾನ ಮಾಡುತ್ತಿವೆ. ಬೆಳಗಾವಿಯ ಮೇಲೆ ಕಾಳಜಿ ಇದ್ದರೇ ರಾಜ್ಯ ಸರ್ಕಾರ ಮರಾಠಿ ಪತ್ರಕರ್ತರನ್ನು ಗಡಿಪಾರು ಮಾಡಬೇಕು. ಇಲ್ಲದಿದ್ದರೇ, ಉಗ್ರ ಹೋರಾಟ ಮಾಡಲಾಗುವುದು. ಅಲ್ಲದೇ ಬೆಳಗಾವಿ ಕರ್ನಾಟಕ ಅವಿಭಾಜ್ಯ ಅಂಗ ಎಂಬ ಠರಾವು ಮಹಾನಗರ ಪಾಲಿಕೆ ಪಾಸ್ ಮಾಡಬೇಕೆಂದು ಒತ್ತಾಯಿಸಿದರು.

ನಂತರ ಈ ಕುರಿತಾದ ಮನವಿಯನ್ನು ಮಹಾಪೌರ ಪ್ರೀತಿ ಕಾಮಕರ್ ಮತ್ತು ಉಪಮಹಾಪೌರ ಹಣುಮಂತ ಕೊಂಗಾಲಿ ಅವರಿಗೆ ಸಲ್ಲಿಸಲಾಯಿತು. ಈ ವೇಳೆ ಮಹಾಪೌರರು ಕಾನೂನಿನ ಚೌಕಟ್ಟಿನಲ್ಲಿ ಕ್ರಮಕೈಗೊಳ್ಳುವುದಾಗಿ ತಿಳಿಸಿದರು.
ರಾಣಿ ಚೆನ್ನಮ್ಮ ವೃತ್ತದಲ್ಲಿ ಹೈಡ್ರಾಮಾ ಸೃಷ್ಠಿಯಾದ ಹಿನ್ನೆಲೆ ಪೊಲೀಸರು ಪ್ರತಿಭಟನಾಕಾರರನ್ನು ವಶಕ್ಕೆ ಪಡೆದ ಘಟನೆ ಕೂಡ ನಡೆಯಿತು.
ಈ ಸಂದರ್ಭದಲ್ಲಿ ಕರವೇ ಶಿವರಾಮೇಗೌಡ ಬಣದ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗಿದ್ಧರು.
