ಬೆಳಗಾವಿ ನಗರದಲ್ಲಿ ಆಟೋಗಳಿಗೆ ಗ್ಯಾಸ್ ಸಮಸ್ಯೆ ದಿನದಿಂದ ದಿನಕ್ಕೆ ಗಂಭೀರ ಸ್ವರೂಪ ಪಡೆಯುತ್ತಿದ್ದು, ಸಾವಿರಾರು ಆಟೋ ಚಾಲಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ನಗರದಲ್ಲಿ ಸಾಮಾನ್ಯವಾಗಿ ದೊರೆಯಬೇಕಾದ ಗ್ಯಾಸ್ ಲಭ್ಯವಾಗದೇ, ಚಾಲಕರು ಗಂಟೆಗಳ ಕಾಲ ಸಾಲಿನಲ್ಲಿ ನಿಲ್ಲುವ ಪರಿಸ್ಥಿತಿ ನಿರ್ಮಾಣವಾಗಿದೆ.

ನಗರದ ಪ್ರಮುಖ ಆರ್ಟಿಓ ವೃತ್ತದ ಸಮೀಪದಲ್ಲಿರುವ ಶಿಲ್ಪಾ ಗೋ ಗ್ಯಾಸ್ ಪಂಪ್ ಬಳಿ “ನೋ ಸ್ಟಾಕ್” ಎಂಬ ನಾಮಫಲಕ ಅಳವಡಿಸಿರುವುದು ಆಟೋ ಚಾಲಕರ ಆಕ್ರೋಶಕ್ಕೆ ಕಾರಣವಾಗಿದೆ.
ಈ ಒಂದು ಪಂಪ್ ಮಾತ್ರವಲ್ಲದೆ, ನಗರದ ಹಲವು ಗ್ಯಾಸ್ ಬಂಕ್ಗಳಲ್ಲೂ ಇದೇ ಪರಿಸ್ಥಿತಿ ಎದುರಾಗುತ್ತಿರುವುದಾಗಿ ಚಾಲಕರು ದೂರಿದ್ದಾರೆ.
ಇನ್ನೊಂದೆಡೆ, ಜಿಲ್ಲಾಡಳಿತವು ಬೆಳಗಾವಿ ನಗರದಲ್ಲಿ ಗ್ಯಾಸ್ ಕೊರತೆ ಇಲ್ಲ ಎಂದು ಹೇಳಿಕೆ ನೀಡಿದರೂ, ಗ್ಯಾಸ್ ಬಂಕ್ಗಳ ಮುಂದೆ “ನೋ ಸ್ಟಾಕ್” ಫಲಕಗಳು ಕಾಣಿಸುತ್ತಿರುವುದು ಜಿಲ್ಲಾಡಳಿತ ಸುಳ್ಳು ಹೇಳಿದೆ ಎಂದು ಆಟೋ ಚಾಲಕರು ಆರೋಪಿಸಿದ್ದಾರೆ.
ಗ್ಯಾಸ್ ಕೊರತೆಯ ನಡುವೆಯೇ ಕೆಲವು ಪಂಪ್ಗಳು ದರ ಹೆಚ್ಚಳ ಮಾಡಿರುವುದು ಆಟೋ ಚಾಲಕರಿಗೆ ಮತ್ತೊಂದು ದೊಡ್ಡ ಹೊರೆ ಆಗಿದೆ. ದಿನನಿತ್ಯದ ಆದಾಯದ ಮೇಲೆ ಬದುಕುತ್ತಿರುವ ಚಾಲಕರಿಗೆ ಇಂಧನದ ಹೆಚ್ಚಿದ ವೆಚ್ಚ ನೇರವಾಗಿ ಆರ್ಥಿಕ ಸಂಕಷ್ಟವನ್ನು ಉಂಟುಮಾಡುತ್ತಿದೆ.
ಬೆಳಗಾವಿ ನಗರದಲ್ಲಿ ಒಟ್ಟು ಆರು ಗ್ಯಾಸ್ ಪಂಪ್ಗಳು ಕಾರ್ಯನಿರ್ವಹಿಸುತ್ತಿದ್ದರೂ, ಸಮರ್ಪಕ ಸರಬರಾಜಿನ ಕೊರತೆಯಿಂದ ಅವುಗಳ ಪ್ರಯೋಜನ ಜನರಿಗೆ ಸಿಗುತ್ತಿಲ್ಲ. ಒಂದೇ ಅಥವಾ ಎರಡು ಪಂಪ್ಗಳ ಮೇಲೆ ಅವಲಂಬನೆ ಹೆಚ್ಚಾಗಿದ್ದು, ಇದರಿಂದ ದೀರ್ಘ ಸಾಲುಗಳು ಹಾಗೂ ಗೊಂದಲದ ಪರಿಸ್ಥಿತಿ ನಿರ್ಮಾಣವಾಗಿದೆ.
ಈ ಹಿನ್ನೆಲೆ, ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಆಟೋ ಚಾಲಕರು ಆಗ್ರಹಿಸಿದ್ದಾರೆ. ಗ್ಯಾಸ್ ಸರಬರಾಜನ್ನು ಸುಗಮಗೊಳಿಸಲು ಜಿಲ್ಲಾಡಳಿತವು ವಿಶೇಷ ನೋಡಲ್ ಅಧಿಕಾರಿಯನ್ನು ನೇಮಿಸಿ, ಪಂಪ್ಗಳ ಮೇಲ್ವಿಚಾರಣೆ ಮಾಡುವಂತೆ ಅಮ ಒತ್ತಾಯಿಸಿದ್ದಾರೆ.
ಸಮಸ್ಯೆಗೆ ಶೀಘ್ರ ಪರಿಹಾರ ದೊರೆಯದಿದ್ದಲ್ಲಿ, ಆಟೋ ಚಾಲಕರು ಬೀದಿಗೆ ಇಳಿದು ಉಗ್ರ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
