ಬಾಗಲಕೋಟೆ ವಿಧಾನಸಭಾ ಉಪಚುನಾವಣೆಯ ಅಖಾಡ ರಂಗೇರಿದ್ದು, ಚುನಾವಣಾ ಆಯೋಗವು ಇಂದಿನಿಂದ ವಿಶೇಷ ಮತದಾನಕ್ಕೆ ಚಾಲನೆ ನೀಡಿದೆ. ಮತಗಟ್ಟೆಗೆ ಬರಲಾಗದ ವಯೋವೃದ್ಧರು ಹಾಗೂ ವಿಕಲಚೇತನರಿಗಾಗಿ ಜಿಲ್ಲಾಡಳಿತವು ಮನೆ ಬಾಗಿಲಿಗೇ ಮತದಾನದ ವ್ಯವಸ್ಥೆ ಕಲ್ಪಿಸಿದ್ದು, ಹಿರಿಯರು ಅತ್ಯಂತ ಉತ್ಸಾಹದಿಂದ ತಮ್ಮ ಹಕ್ಕು ಚಲಾಯಿಸುತ್ತಿದ್ದಾರೆ.

ಬಾಗಲಕೋಟೆ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ನಿಮಿತ್ತ 85 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು ಹಾಗೂ ವಿಕಲಚೇತನರಿಗಾಗಿ ವಿಶೇಷ ‘ಮನೆಯಿಂದಲೇ ಮತದಾನ’ ಪ್ರಕ್ರಿಯೆ ಆರಂಭವಾಗಿದೆ. ಜಿಲ್ಲಾಧಿಕಾರಿ ಸಂಗಪ್ಪ ಅವರ ನೇತೃತ್ವದಲ್ಲಿ ಚುನಾವಣಾ ಅಧಿಕಾರಿಗಳ ತಂಡವು ಜಿಲ್ಲೆಯ ವಿವಿಧ ಮನೆಗಳಿಗೆ ಭೇಟಿ ನೀಡಿ ಮತದಾನ ಮಾಡಿಸಿಕೊಳ್ಳುತ್ತಿದ್ದಾರೆ. ಕ್ಷೇತ್ರದಲ್ಲಿ ಒಟ್ಟು 183 ಮಂದಿ ವಯೋವೃದ್ಧರು ಹಾಗೂ 90 ವಿಕಲಚೇತನರು ಸೇರಿದಂತೆ ಒಟ್ಟು 273 ಜನರಿಗೆ ಈ ವಿಶೇಷ ಸೌಲಭ್ಯ ಕಲ್ಪಿಸಲಾಗಿದೆ. ವಿದ್ಯಾಗಿರಿಯ ಮತಗಟ್ಟೆ ಸಂಖ್ಯೆ 92ರ ವ್ಯಾಪ್ತಿಯಲ್ಲಿ 86 ವರ್ಷದ ಮುರುಗೇಪ್ಪ ಜಿಗಜಿನ್ನಿ ಹಾಗೂ ಮತಗಟ್ಟೆ ಸಂಖ್ಯೆ 148ರಲ್ಲಿ ಡಾ. ಹೊನ್ನಪ್ಪ ಕೋರಾ ಅವರು ಮನೆಯಿಂದಲೇ ಮತ ಚಲಾಯಿಸಿ ಮಾದರಿಯಾಗಿದ್ದಾರೆ. ಇಂದು ಮತ್ತು ನಾಳೆ ಈ ವಿಶೇಷ ಮತದಾನ ಪ್ರಕ್ರಿಯೆ ಮುಂದುವರಿಯಲಿದೆ.
