ಬೆಳಗಾವಿಯಲ್ಲಿ ಇಂದು ಕರ್ನಾಟಕ ರಾಜ್ಯ ಪೊಲೀಸ್ ಧ್ವಜ ದಿನಾಚರಣೆಯನ್ನು ಅತ್ಯಂತ ಸಡಗರ ಮತ್ತು ಶಿಸ್ತಿನಿಂದ ಆಚರಿಸಲಾಯಿತು. ಬೆಳಗಾವಿ ನಗರ ಪೊಲೀಸ್ ಕಮಿಷನರೇಟ್ ಹಾಗೂ ಜಿಲ್ಲಾ ಪೊಲೀಸ್ ವತಿಯಿಂದ ಆಯೋಜಿಸಲಾಗಿದ್ದ ಈ ಸಮಾರಂಭದಲ್ಲಿ ನಿವೃತ್ತ ಪೊಲೀಸ್ ಅಧಿಕಾರಿಗಳನ್ನು ಮುಖ್ಯ ಅತಿಥಿಗಳಾಗಿ ಆಹ್ವಾನಿಸಿ ಗೌರವಿಸಲಾಯಿತು.

ಬೆಳಗಾವಿಯ ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ನಡೆದ ಪೊಲೀಸ್ ಧ್ವಜ ದಿನಾಚರಣೆಯ ಅಧ್ಯಕ್ಷತೆಯನ್ನು ಉತ್ತರ ವಲಯ ಐಜಿಪಿ ಡಾ. ಚೇತನ್ ಸಿಂಗ್ ರಾಠೋರ್ ಅವರು ವಹಿಸಿದ್ದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ನಿವೃತ್ತ ಪಿಎಸ್ಐಗಳಾದ ಆರ್. ಬಿ. ಸೌದಾಗರ ಮತ್ತು ಪಿ. ನಾಗರಾಜ ಅವರು ಪೊಲೀಸ್ ಧ್ವಜಗಳನ್ನು ವಿತರಿಸಿ, ಪೊಲೀಸ್ ಇಲಾಖೆಯ ಶಿಸ್ತು ಮತ್ತು ಸೇವೆಯ ಮಹತ್ವದ ಬಗ್ಗೆ ಮಾತನಾಡಿದರು. ಪೊಲೀಸ್ ಆಯುಕ್ತ ಭೂಷಣ್ ಬೋರಸೆ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್ ಅವರ ನೇತೃತ್ವದಲ್ಲಿ ನಡೆದ ಈ ಸಮಾರಂಭದಲ್ಲಿ ಆಕರ್ಷಕ ಪಥಸಂಚಲನ ಮತ್ತು ಗೌರವ ವಂದನೆ ಸಲ್ಲಿಕೆಯಾಯಿತು. ಕಾರ್ಯಕ್ರಮದ ನಂತರ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರಿಗಾಗಿ ಲಘು ಉಪಹಾರದ ವ್ಯವಸ್ಥೆ ಮಾಡಲಾಗಿತ್ತು.

ಐಜಿಪಿ ಚೇತನ್’ಸಿಂಗ್ ರಾಥೋರ್ ಅವರು, ಪೊಲೀಸ್ ದಿನಾಚರಣೆ ಹಿನ್ನೆಲೆ ಸ್ಟ್ಯಾಂಪಿಗಳನ್ನು ಮಾರಾಟ ಮಾಡಲಾಗುತ್ತದೆ. ಇದರಿಂದ ಸಂಗ್ರಹವಾದ ಹಣವನ್ನು ಕರ್ತವ್ಯನಿರತ ಮತ್ತು ನಿವೃತ್ತ ಸಿಬ್ಬಂದಿಯ ಕಲ್ಯಾಣಕ್ಕಾಗಿ ಉಪಯೋಗಿಸಲಾಗುತ್ತದೆ. ಡಿಜಿ-ಐಜಿಪಿ ಸಲೀಮ್ ಅವರು ಕಲ್ಯಾಣ ಮಂಟಪ ನಿರ್ಮಾಣಕ್ಕೆ ಹಣ ನೀಡುವುದಾಗಿ ತಿಳಿಸಿದ್ದರು. ಈಗಾಗಲೇ ಅದರಲ್ಲಿ 5 ಕೋಟಿ ರೂಪಾಯಿ ಬಿಡುಗಡೆ ಮಾಡಲಾಗಿದೆ. ಈಗಾಗಲೇ ನಗರ ಪೊಲೀಸ್ ಆಯುಕ್ತರಾದ ಭೂಷಣ್ ಬೋರಸೆ ಅವರು ಬೆಳಗಾವಿಯ ಕಂಗ್ರಾಳಿಯಲ್ಲಿ ಪೊಲೀಸ್ ಭವನ ನಿರ್ಮಾಣಕ್ಕೆ ಜಾಗೆಯನ್ನು ಗುರುತಿಸಿದ್ದು, ಇದೇ ವರ್ಷದಲ್ಲಿ ಕಾಮಗಾರಿಯನ್ನು ಮುಗಿಸಬೇಕೆಂದರು. ಅಲ್ಲದೇ, ಎಸ್ಪಿ ಕೆ.ರಾಮರಾಜನ್ ಅವರ ಬೇಡಿಕೆಯಂತೆ ಜಿಮ್ ಮತ್ತು ಅಂಗನವಾಡಿ ನಿರ್ಮಾಣ ಕಾಮಗಾರಿಯನ್ನು ಶೀಘ್ರದಲ್ಲೇ ಮುಕ್ತಾಯಗೊಳಿಸಿದರೇ, ಎಲ್ಲರಿಗೂ ಅನುಕೂಲವಾಗಲಿದೆ ಎಂದರು.

ಡಿಸಿಪಿ ನಾರಾಯಣ್ ಬರಮನಿ ಅವರು, ಏಪ್ರಿಲ್ 2, 1965 ರಿಂದ ಕರ್ನಾಟಕದಲ್ಲಿ ಪೊಲೀಸ್ ಕಾಯ್ದೆ ಜಾರಿಯಾಯಿತು. ಸುಮಾರು ದಶಕಗಳ ಕಾಲ ಪೊಲೀಸ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸಿ ನಿವೃತ್ತರಾದ ಪೊಲೀಸ್ ಅಧಿಕಾರಿ ಮತ್ತು ಅವರ ಕುಟುಂಬಕ್ಕೊಸ್ಕರ ಕಲ್ಯಾಣ ಮತ್ತು ಶ್ರೇಯೋಭಿವೃದ್ಧಿಗಾಗಿ ಕಲ್ಯಾಣ ನಿಧಿಯನ್ನು ಸ್ಥಾಪಿಸಲಾಯಿತು. ಈ ಹಿನ್ನೆಲೆಯಲ್ಲಿ ಪೊಲೀಸ್ ಧ್ವಜ ದಿನಾಚರಣೆಯನ್ನು ರಾಜ್ಯದೆಲ್ಲೆಡೆ ಆಚರಿಸಲಾಗುತ್ತದೆ ಎಂದರು.

ಎಸ್ಪಿ. ರಾಮರಾಜನ್ ಕೆ. ಅವರು ಸಮಾಜದಲ್ಲಿ ಶಾಂತಿ ಸುವ್ಯವಸ್ಥೆಯನ್ನು ಕಾಪಾಡಲೂ ನಮ್ಮ ಪೊಲೀಸ್ ಇಲಾಖೆಯ ಕಾರ್ಯ ಅಪ್ರತಿಮವಾಗಿದೆ. ಇದಕ್ಕಾಗಿ ಸಿಬ್ಬಂದಿಗಳ ಸೇವೆ ಅಮೂಲ್ಯವಾಗಿರುತ್ತದೆ. ನಿವೃತ್ತ ಪೊಲೀಸರ ಸೇವೆ ಕೈಜೋಡಿಸುವ ಕೆಲಸವಾಗಬೇಕು. ಕಲ್ಯಾಣ ನಿಧಿಯಿಂದ 64 ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳ 7 ಲಕ್ಷ 41 ಸಾವಿರ ರೂಪಾಯಿಯನ್ನು ಚಿಕಿತ್ಸೆಗಾಗಿ ಮತ್ತು 15 ಜನರ ಶವ ಸಂಸ್ಕಾರಕ್ಕಾಗಿ 1 ವರೆ ಲಕ್ಷ ರೂಪಾಯಿ ಖರ್ಚು ಮಾಡಲಾಗಿದೆ ಎಂದರು.
ನಿವೃತ್ತ ಪಿ.ಎಸ್.ಐ ಆರ್.ಬಿ. ಸೌದಾಗರ ಅವರು, ಪೊಲೀಸ್ ಧ್ವಜವು ಕೇವಲ ಒಂದು ಸಂಕೇತವಾಗಿರದೇ, ಪೊಲೀಸ್ ಇಲಾಖೆಯ ಶಿಸ್ತು ಮತ್ತು ತ್ಯಾಗ ಪ್ರತಿಬಿಂಬವಾಗಿದೆ. ಪ್ರತಿಯೊಬ್ಬ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ತಮ್ಮ ಸೇವೆಯನ್ನು ನಿಷ್ಠೆಯಿಂದ ನಿರ್ವಹಿಸಬೇಕು. ಬಿಸಿಲು, ಮಳೆ, ಗಾಳಿಯ ವ್ಯತ್ಯಾಸವಿಲ್ಲದೇ ಪ್ರಾಮಾಣಿಕವಾಗಿ ಪೊಲೀಸರು ಸೇವೆ ಸಲ್ಲಿಸುತ್ತಾರೆ. ಪೊಲೀಸ್ ಇಲಾಖೆ ಬಲಿಷ್ಠವಾಗಿದ್ದರೇ, ಸಮಾಜವು ಬಲಿಷ್ಠವಾಗಿರುತ್ತದೆ ಎಂದರು.
ನಿವೃತ್ತ ಪಿ.ಎಸ್.ಐ ಪಿ. ನಾಗರಾಜ್ ಅವರು, ಪೊಲೀಸರ ತ್ಯಾಗ ಮತ್ತು ಬಲಿದಾನಕ್ಕೆ ಗೌರವವನ್ನು ಸಲ್ಲಿಸಲು ಪೊಲೀಸ್ ಧ್ವಜ ದಿನಾಚರಣೆಯನ್ನು ಆಚರಿಸಲಾಗುತ್ತದೆ. ಪೊಲೀಸ್ ಕಲ್ಯಾಣ ನಿಧಿಯೂ ನಿವೃತ್ತ ಪೊಲೀಸರ ಆರೋಗ್ಯ ಮತ್ತು ಸಮಸ್ಯೆಗಳನ್ನು ನಿವಾರಿಸಲು ಪೂರಕವಾಗಿದೆ ಎಂದರು.
ಈ ಸಂದರ್ಭದಲ್ಲಿ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಭಾಗಿಯಾಗಿದ್ಧರು.
