Vijaypura

ರಾಮಭಕ್ತ, ಸರ್ವಶಕ್ತ ಹನುಮ ಜಯಂತಿ; ಪುರಾತನ ದೇವಸ್ಥಾನದಲ್ಲಿ ಸಂಭ್ರಮ ಸಡಗರದಿಂದ ಆಚರಣೆ

Share

ಇಂದು ವೀರ ಹನುಮನ ಜಯಂತಿ. ಹನುಮಾನ್ ಜಯಂತಿಯು ಕೇವಲ ಆಚರಣೆಯಲ್ಲ, ಅದು ಭಕ್ತಿ, ಶಕ್ತಿ ಮತ್ತು ಸಮರ್ಪಣಾ ಮನೋಭಾವದ ಸಂಕೇತವಾಗಿದೆ. ಇಂತಹ ಹನುಮ ಜಯಂತಿಯನ್ನು ವಿಜಯಪುರ ನಗರದಲ್ಲಿ ಬಹು ಸಡಗರ ಸಂಭ್ರಮದಿಂದ ಆಚರಿಸಲಾಯಿತು. ಇನ್ನೂ ಅತ್ಯಂತ ಹಳೆಯ ದೇವಸ್ಥಾನದಲ್ಲಿ ಹನುಮ ಜಯಂತಿ ಸಂಭ್ರಮ ಕಳೆಗಟ್ಟಿತ್ತು. ಈ ಕುರಿತು ಇಲ್ಲಿದೆ ಒಂದು ವರದಿ…

ಹಿಂದೂ ಧರ್ಮದಲ್ಲಿ ಹನುಮ ಜಯಂತಿಯು ಅತ್ಯಂತ ಮಂಗಳಕರ ಮತ್ತು ಶಕ್ತಿಯುತ ಹಬ್ಬಗಳಲ್ಲಿ ಒಂದಾಗಿದೆ. ಜಗತ್ ಒಡೆಯ ಶಿವನ 11ನೇ ಅವತಾರವೆಂದು ನಂಬಲಾದ ಆಂಜನೇಯನ ಜನ್ಮದಿನವನ್ನು ಚೈತ್ರ ಮಾಸದ ಶುಕ್ಲ ಪಕ್ಷದ ಪೂರ್ಣಿಮೆಯಂದು ಆಚರಿಸಲಾಗುತ್ತದೆ. ಇಂದು ಈ ಪವಿತ್ರ ದಿನ ಬಂದಿದ್ದು, ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಈ ದಿನದಂದು ಹನುಮಂತನನ್ನು ಆರಾಧಿಸುವುದರಿಂದ ಜಾತಕದಲ್ಲಿರುವ ಶನಿ ಮತ್ತು ಮಂಗಳ ಗ್ರಹದ ದೋಷಗಳು ನಿವಾರಣೆಯಾಗುತ್ತವೆ ಎಂಬ ನಂಬಿಕೆ ಇದೆ. ಈ ಹಿನ್ನೆಲೆಯಲ್ಲಿ ಇಂದು ವಿಜಯಪುರ ನಗರದ ಮಧ್ಲಾ ಮಾರುತಿ ದೇವಸ್ಥಾನದಲ್ಲಿ ಹನುಮ ಜಯಂತಿ ನಿಮಿತ್ತವಾಗಿ ವಿವಿಧ ಧಾರ್ಮಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು‌. ಪಟ್ಟಣದ ವಿಠಲ ಮಂದಿರದಲ್ಲಿ ಚಿದಂಬರ ದೇವಸ್ಥಾನ ಸಮಿತಿ ಪದಾಧಿಕಾರಿಗಳು ವಿವಿಧ ಹೂವು, ಹಾರ, ತಳಿರು ತೋರಣಗಳಿಂದ ಸಿಂಗರಿಸಿ ಹನುಮಾನ ಜಯಂತಿಗೆ ಮೆರುಗು ತರಲಾಗಿತ್ತು. ಈ ವೇಳೆ ಹಲವು ಭಕ್ತರು ಪಾಲ್ಗೊಂಡು ವಿಶೇಷ ಪೂಜೆ ಸಲ್ಲಿಸಿದರು.ಬಳಿಕ ಮಹಿಳೆಯರಿಂದ ತೊಟ್ಟಿಲೋತ್ಸವ ನಡೆಯಿತು. ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಎಲ್ಲರಿಗೂ ಪಾನಕ, ಕೋಸಂಬರಿ ಪ್ರಸಾದ ವಿತರಿಸಲಾಯಿತು. ಇನ್ನೂ ಮದ್ಯಾಹ್ನ ಸಾವಿರಾರು ಭಕ್ತರಿಗೆ ಮಹಾ ಪ್ರಸಾದ ವಿತರಣೆ ನಡೆಯಿತು‌. ಅನ್ನ ಸಾರು ಹಾಗೂ ಶಿರಾ ಪ್ರಸಾದ ವಿತರಿಸಲಾಯಿತು.

ಇನ್ನೂ ಮಾರುತಿ ದೇವರಿಗೆ ಪಂಚಾಮೃತದೊಂದಿಗೆ ಅಭಿಷೇಕಗೈದು, ಅಷ್ಟೋತ್ತರ ಸಹಿತ ಎಲ್ಲ ವಿಧಿವಿಧಾನಗಳನ್ನು ಶಾಸ್ರೋಕ್ತವಾಗಿ ನೆರವೇರಿಸಲಾಯಿತು. ತದನಂತರ ಮಹಿಳೆಯರೆಲ್ಲ ಸೇರಿ ಬಾಲ ಹನುಮನ ಕುರಿತಾದ ಭಕ್ತಿಗೀತೆಗಳ ಗಾಯನದ ಮೂಲಕ ತೊಟ್ಟಿಲೋತ್ಸವ ನೆರವೇರಿಸಿದರು. ನಂತರ ಅಭಿಷೇಕ, ಪಾನಕ, ಕೋಸಂಬರಿ ವಿತರಣೆ ಕಾರ್ಯಕ್ರಮ ಜರುಗಿತು. ಈ ಬಾರಿ ಗ್ಯಾಸ್ ತೊಂದರೆಯಿಂದ ಸೌದೆ ಒಲೆಯ ಮೇಲೆ ಪ್ರಸಾದ ತಯಾರಿಸಿದ್ದು ವಿಶೇಷವಾಗಿತ್ತು. ಇನ್ನೂ ಹಲವು ಭಕ್ತರು ಹನುಮಾನ್ ಚಾಲೀಸಾ ಪಠಿಸಿದರು. ನಗರದಲ್ಲಿ ನಿನ್ನೆಯೂ ಕೂಡಾ ಹಲವೆಡೆ ಹನುಮ ಜಯಂತಿ ಆಚರಿಸಲಾಗಿತ್ತು‌. ಇಂದು ವಿಜಯಪುರ ನಗರದ ಬಹುತೇಕ ಹನುಮಂತ ದೇವಸ್ಥಾನಗಳಲ್ಲಿ ಬಹು ಸಂಭ್ರಮದಿಂದ ಜಯಂತಿ ಆಚರಿಸಲಾಯಿತು.

ಒಟ್ನಲ್ಲಿ ಅಂಜನಾ ದೇವಿಯ ಪುತ್ರನಾದ ವಾಯು ದೇವರನ್ನು ನಿತ್ಯ ಆರಾಧಿಸುವುದರಿಂದ ರಾಮ ದೇವರ ಕೃಪೆಯೂ ದೊರೆಯುತ್ತದೆ ಎಂದು ಭಕ್ತರು ಸರ್ವ ಶಕ್ತ ಹನುಮಂತ ದೇವರ ಆಶಿರ್ವಾದ ಪಡೆದು ಕೃತಾರ್ಥರಾದರು.

Tags:

error: Content is protected !!