ಮಧ್ಯ ಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧದ ಪರಿಣಾಮ ಇದೀಗ ರಾಜ್ಯದಲ್ಲಿಯೂ ಕಾಣಿಸಿಕೊಳ್ಳುತ್ತಿದೆ. ಗ್ಯಾಸ್ ಸಿಲಿಂಡರ್ ಕೊರತೆಯಿಂದ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ರಾಜ್ಯದೆಲ್ಲೆಡೆ ಗ್ಯಾಸ್ ಸಿಲಿಂಡರ್ ಅಭಾವ ತಲೆದೋರಿದ್ದು, ಕೆಲವೆಡೆ ತೀವ್ರ ಗೋಳಾಟವೂ ಉಂಟಾಗಿದೆ. ಇದರಿಂದ ಧಾರ್ಮಿಕ ಕಾರ್ಯಕ್ರಮಗಳ ಮೇಲೂ ಪರಿಣಾಮ ಬಿದ್ದಿದೆ. ವಿಜಯಪುರ ನಗರದ ಮದಲಾ ಮಾರುತಿ ದೇವಸ್ಥಾನದಲ್ಲಿಯೂ ಗ್ಯಾಸ್ ಕೊರತೆಯ ಪರಿಣಾಮ ಸ್ಪಷ್ಟವಾಗಿ ಕಂಡುಬಂದಿದೆ.

ಪ್ರತಿ ವರ್ಷ ಹನುಮ ಜಯಂತಿ ಪ್ರಯುಕ್ತ ದೇವಸ್ಥಾನದಲ್ಲಿ ಭಕ್ತರಿಗೆ ಪ್ರಸಾದ ವಿತರಣೆ ಮಾಡಲಾಗುತ್ತದೆ. ಆದರೆ ಈ ಬಾರಿ ಗ್ಯಾಸ್ ಸಿಲಿಂಡರ್ ದೊರೆಯದ ಹಿನ್ನೆಲೆಯಲ್ಲಿ ಕಟ್ಟಿಗೆ ಒಲೆ ಬಳಸಿ ಪ್ರಸಾದ ತಯಾರಿಸಲಾಗಿದೆ. ಅನ್ನ, ಸಾರು ಹಾಗೂ ಶಿರಾ ಸೇರಿದಂತೆ ವಿವಿಧ ಪ್ರಸಾದಗಳನ್ನು ಕಟ್ಟಿಗೆ ಒಲೆ ಮೇಲೆ ಸಿದ್ಧಪಡಿಸಲಾಗಿದ್ದು, ಭಕ್ತರಿಗೆ ವಿತರಣೆ ಮಾಡಲಾಗಿದೆ. ಗ್ಯಾಸ್ ಸಿಲಿಂಡರ್ ಕೊರತೆ ಸಾಮಾನ್ಯ ಜನರಷ್ಟೇ ಅಲ್ಲದೆ, ದೇವಸ್ಥಾನಗಳಿಗೂ ತಟ್ಟಿದ್ದು, ಯುದ್ಧದ ಪರಿಣಾಮ ಎಷ್ಟರ ಮಟ್ಟಿಗೆ ಇದೆ ಎಂಬುದಕ್ಕೆ ಇದು ಸಾಕ್ಷಿಯಾಗಿದೆ.
