ದೇಶದ ವಿಕಾಸಕ್ಕೆ ಸಿದ್ಧಗಂಗಾ ಮಠದ ಪಾತ್ರ ಬಹುದೊಡ್ಡದಿದೆ ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಹೇಳಿದ್ದಾರೆ.

ಸಿದ್ದಗಂಗಾ ಮಠದಲ್ಲಿ ಇಂದು ನಡೆದ ಡಾ. ಶಿವಕುಮಾರ ಮಹಾಸ್ವಾಮೀಜಿಗಳ 119ನೇ ಜನ್ಮ ಜಯಂತಿ ಹಾಗೂ ಗುರುವಂದನಾ ಮಹೋತ್ಸವ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಭಾಗಿಯಾದರು.ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ರಾಷ್ಟ್ರಪತಿಗಳು, ಶಿವಕುಮಾರ ಸ್ವಾಮೀಜಿಗಳಂತಹ ಮಹನೀಯರು ನಮ್ಮ ಸಮಾಜ ಮತ್ತು ರಾಷ್ಟ್ರದ ಆತ್ಮಸ್ವರೂಪವನ್ನು ಪ್ರತಿನಿಧಿಸುತ್ತಾರೆ. 2019ರಲ್ಲಿ ಅವರ ದೇಹ ಲೀನವಾದರೂ, ಅವರ ಆಧ್ಯಾತ್ಮಿಕತೆ ಸಮಾಜ ಮತ್ತು ರಾಷ್ಟ್ರವನ್ನು ಸದಾ ಪೋಷಿಸುತ್ತಲೇ ಇರುತ್ತದೆ. ಅವರು ತಮ್ಮ ಆಧ್ಯಾತ್ಮಿಕ ಚಟುವಟಿಕೆಗಳ ಮೂಲಕ ಮನುಕುಲಕ್ಕೆ ಮಹತ್ತರ ಕೊಡುಗೆ ನೀಡಿದ್ದಾರೆ. ಬಡವರು ಹಾಗೂ ಹಿಂದುಳಿದ ವರ್ಗಗಳ ಸೇವೆಗೆ ಸಮರ್ಪಿತವಾಗಿದ್ದ ಅವರ ಜೀವನ, ಸೇವಾ ಕಾರ್ಯಗಳ ಮೂಲಕ ಆಧ್ಯಾತ್ಮವನ್ನು ವ್ಯಕ್ತಪಡಿಸಿದ ಅದ್ಭುತ ಉದಾಹರಣೆಯಾಗಿದೆ ಎಂದು ಮಠವು ಸ್ವಾಮೀಜಿಗಳ ಮಹತ್ವದ ಕಾರ್ಯಗಳನ್ನು ಮುಂದುವರಿಸುತ್ತಿರುವುದನ್ನು ಶ್ಲಾಘಿಸಿದರು. ಪ್ರಾಥಮಿಕ ಶಿಕ್ಷಣದಿಂದ ಇಂಜಿನಿಯರಿಂಗ್ ಹಾಗೂ ನಿರ್ವಹಣಾ ಅಧ್ಯಯನಗಳವರೆಗೆ ಶಿಕ್ಷಣ ವ್ಯವಸ್ಥೆಯನ್ನು ಮಠವು ಒದಗಿಸುತ್ತಿರುವುದು ಸಂತೋಷದ ಸಂಗತಿಯಾಗಿದೆ. ಅಲ್ಲದೇ ಸ್ವಾಮೀಜಿಗಳ ಮಾರ್ಗದರ್ಶನದಲ್ಲಿ ಸ್ಥಾಪಿತವಾದ ಸಿದ್ಧಗಂಗಾ ಆಸ್ಪತ್ರೆ ಸಾರ್ವಜನಿಕರಿಗೆ ಉತ್ತಮ ಆರೋಗ್ಯ ಸೇವೆಗಳನ್ನು ನೀಡುತ್ತಿರುವುದು ಶ್ಲಾಘನೀಯ ಎಂದು ರಾಷ್ಟ್ರಪತಿಗಳು ಬಣ್ಣಿಸಿದರು.

ವೀರಶೈವ-ಲಿಂಗಾಯತ ಮಠಗಳು ತಮ್ಮದೇ ಆದ ಸೇವೆ ಸಲ್ಲಿಸುತ್ತಾ ಬಂದಿದ್ದು, ಅದರಲ್ಲಿ ಸಿದ್ಧಗಂಗಾಮಠ ಮುಂಚೂಣಿಯಲ್ಲಿದೆ. ಶಿವಕುಮಾರ ಸ್ವಾಮೀಜಿಗಳು ಇಷ್ಟು ವರ್ಷಗಳು ಒಂದೇ ಸ್ಥಳದಲ್ಲಿ ಒಂದೇ ಕಾರ್ಯ ನಿರಂತರವಾಗಿ ಮಾಡುವ ಮೂಲಕ ಜೀವನ ಸಮರ್ಪಣೆ ಮಾಡಿದ್ದಾರೆ. ಸ್ವಾಮೀಜಿಗಳ ದಾರಿಯನ್ನು ವಿಸ್ಮಯ ಹಾಗೂ ಪವಾಡ ಎನ್ನಬಹುದು ಎಂದು ಕಾರ್ಯಕ್ರಮದಲ್ಲಿ ಮಾತನಾಡಿದ ಸಿದ್ದಲಿಂಗಸ್ವಾಮೀಜಿ ಹೇಳಿದ್ದಾರೆ. ಶಿವಕುಮಾರ ಸ್ವಾಮೀಜಿಗಳ ಬದುಕಿನಲ್ಲಿ 2 ಘಟನೆಗಳಿವೆ. ಅವೆಂದರೆ ಬಡಮಕ್ಕಳಿಗೆ ಮತ್ತು ಹೆಣ್ಣು ಮಕ್ಕಳಿಗೆ ಶಿಕ್ಷಣ ನೀಡೋದು ಎಂದು ಶ್ರೀಗಳು ತಿಳಿಸಿದ್ದಾರೆ.
ಇದೇ ವೇಳೆ ಮಾತನಾಡಿದ ರಾಜ್ಯಪಾಲ ಗೆಹ್ಲೋಟ್, ಮಾನವತಾ ಕಲ್ಯಾಣಕ್ಕಾಗಿ ದುಡಿದ ಶಿವಕುಮಾರ ಶ್ರಿಗಳ ಸೇವೆ ಅನನ್ಯವಾಗಿದೆ. ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಎಂಬ ರೀತಿ ಶ್ರೀಗಳು ಸೇವೆ ಮಾಡುತಿದ್ದರು ಎಂದು ಗುಣಗಾನ ಮಾಡಿದರು.
