ಬಾಗಲಕೋಟೆ ಉಪಚುನಾವಣಾ ಕಣ ಈಗ ಅಕ್ಷರಶಃ ರಣಕಣವಾಗಿ ಮಾರ್ಪಟ್ಟಿದೆ. ಇಂದು ನಗರದ ಖಾಸಗಿ ರೆಸಾರ್ಟ್ನಲ್ಲಿ ಜಂಟಿ ಸುದ್ದಿಗೋಷ್ಠಿ ನಡೆಸಿದ ಡಿ.ಸಿ.ಎಂ ಡಿ.ಕೆ.ಶಿವಕುಮಾರ್ ಹಾಗೂ ರಣದೀಪ್ ಸಿಂಗ್ ಸುರ್ಜೇವಾಲಾ ಅವರು ಬಿಜೆಪಿಯ ಅಕ್ರಮಗಳ ವಿರುದ್ಧ ಗುಡುಗಿದ್ದಾರೆ. ವಿದ್ಯಾರ್ಥಿಗಳನ್ನು ಹೆದರಿಸಿ ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸುತ್ತಿರುವ ಗಂಭೀರ ಆರೋಪದೊಂದಿಗೆ, ಕೇಂದ್ರದ ಬೆಲೆ ಏರಿಕೆ ನೀತಿಯನ್ನು ಕಟುವಾಗಿ ಟೀಕಿಸಿದ್ದಾರೆ.
ಬಾಗಲಕೋಟೆಯಲ್ಲಿಂದು ಮಾತನಾಡಿದ ಡಿ.ಕೆ.ಶಿವಕುಮಾರ್ ಅವರು, ಬಿಜೆಪಿ ಅಭ್ಯರ್ಥಿ ವೀರಣ್ಣ ಚರಂತಿಮಠ ಅವರ ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾರ್ಥಿಗಳನ್ನು ಹೆದರಿಸಿ ಎರಡೆರಡು ಕಡೆ ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸುವ ಅಕ್ರಮ ನಡೆಯುತ್ತಿದೆ ಎಂದು ಗಂಭೀರ ಆರೋಪ ಮಾಡಿದರು. “ವಿದ್ಯಾರ್ಥಿಗಳಿಗೆ ಫೇಲ್ ಮಾಡುವ ಬೆದರಿಕೆ ಹಾಕಿ ಮತದಾನದ ಹಕ್ಕನ್ನು ದುರುಪಯೋಗ ಪಡಿಸಿಕೊಳ್ಳಲಾಗುತ್ತಿದೆ, ಇದರ ವಿರುದ್ಧ ನಮ್ಮ ತಂಡ ಕಾನೂನು ಹೋರಾಟ ನಡೆಸಲಿದೆ” ಎಂದು ಎಚ್ಚರಿಸಿದರು. ಇದೇ ವೇಳೆ ಕೇಂದ್ರ ಸರ್ಕಾರ ರಾಜ್ಯಕ್ಕೆ ಬರಬೇಕಾದ 15 ಸಾವಿರ ಕೋಟಿ ರೂ. ಅನುದಾನವನ್ನು ತಡೆಹಿಡಿದಿದೆ ಎಂದು ಕಿಡಿಕಾರಿದ ಅವರು, ಜನರ ಋಣ ತೀರಿಸಲು ನಮ್ಮ ಗ್ಯಾರಂಟಿ ಯೋಜನೆಗಳು ಆಸರೆಯಾಗಿವೆ ಎಂದರು.
ಇನ್ನೊಂದೆಡೆ ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರು ಕೇಂದ್ರದ ಬೆಲೆ ಏರಿಕೆ ನೀತಿಯನ್ನು ‘ಪಿಕ್ ಪಾಕೆಟ್’ ಸರ್ಕಾರಕ್ಕೆ ಹೋಲಿಸಿ ವಾಗ್ದಾಳಿ ನಡೆಸಿದರು. ಏಪ್ರಿಲ್ 1 ಅನ್ನು ಮೋದಿ ಸರ್ಕಾರ ಜನರ ಜೇಬಿಗೆ ಕತ್ತರಿ ಹಾಕಲು ಬಳಸಿಕೊಳ್ಳುತ್ತಿದೆ ಎಂದು ಲೇವಡಿ ಮಾಡಿದ ಅವರು, ಗ್ಯಾಸ್ ಸಿಲಿಂಡರ್ ಬೆಲೆ 2000 ರೂಪಾಯಿ ಗಡಿ ದಾಟಿರುವುದು ಮತ್ತು ಔಷಧಿ ಹಾಗೂ ಟೋಲ್ ದರ ಏರಿಕೆಯು ಜನರ ಬದುಕನ್ನು ಸಂಕಷ್ಟಕ್ಕೆ ದೂಡಿದೆ ಎಂದು ಟೀಕಿಸಿದರು. “ಬಿಜೆಪಿ ಇದ್ದರೆ ಬೆಲೆ ಏರಿಕೆ ಖಚಿತ, ಕಾಂಗ್ರೆಸ್ ಇದ್ದರೆ ಗ್ಯಾರಂಟಿಗಳ ಸುರಕ್ಷೆ ನಿಶ್ಚಿತ” ಎಂದು ಹೇಳುವ ಮೂಲಕ ಉಪಚುನಾವಣೆಯಲ್ಲಿ ಮತದಾರರು ಬಿಜೆಪಿಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
