Kagawad

ಉಗಾರ ಖುರ್ದದಲ್ಲಿ ಆಧ್ಯಾತ್ಮಿಕ ಸೌರಭ: ಏಪ್ರಿಲ್ 6ರಿಂದ ಮೂರು ದಿನಗಳ ಕಾಲ ಶ್ರೀ ಮಲ್ಲಿಕಾರ್ಜುನ ಆಶ್ರಮದ ವಾರ್ಷಿಕೋತ್ಸವ!

Share

ಕಾಗವಾಡ ತಾಲೂಕಿನ ಉಗಾರ ಖುರ್ದ ಪಟ್ಟಣದ ಶ್ರೀ ಮಲ್ಲಿಕಾರ್ಜುನ ಗುರುದೇವಾಶ್ರಮದಲ್ಲಿ 2026ರ ಏಪ್ರಿಲ್ 6 ರಿಂದ ಏಪ್ರಿಲ್ 8 ರವರೆಗೆ ಮೂರು ದಿನಗಳ ಕಾಲ ವಾರ್ಷಿಕೋತ್ಸವದ ಅಂಗವಾಗಿ ವಿಶೇಷ ಆಧ್ಯಾತ್ಮಿಕ ಕಾರ್ಯಕ್ರಮಗಳು ಜರುಗಲಿವೆ ಎಂದು ಪೂಜ್ಯ ಶ್ರೀ ಬಸವಲಿಂಗ ಮಹಾಸ್ವಾಮೀಜಿಯವರು ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ.

ನಡೆದಾಡುವ ದೇವರೆಂದೇ ಪ್ರಖ್ಯಾತರಾಗಿದ್ದ ಶ್ರೀ ಸಿದ್ದೇಶ್ವರ ಸ್ವಾಮೀಜಿಯವರಿಂದ ಸ್ಥಾಪಿತವಾದ ಈ ಆಶ್ರಮದ ನಂದನವನದಂತಹ ಪರಿಸರದಲ್ಲಿ ಪ್ರತಿದಿನ ಸಾಯಂಕಾಲ 6.30 ಗಂಟೆಗೆ ಪ್ರವಚನ ಹಾಗೂ ಗೋಷ್ಠಿಗಳು ನಡೆಯಲಿವೆ.ಏಪ್ರಿಲ್ 6ರ ಸೋಮವಾರದಂದು ‘ಭಾರತೀಯ ಸಂಸ್ಕೃತಿ’ ಎಂಬ ವಿಷಯದ ಕುರಿತು ಕಾರ್ಯಕ್ರಮ ನಡೆಯಲಿದ್ದು, ಬೀಳೂರು ವಿರಕ್ತಮಠದ ಪೂಜ್ಯ ಶ್ರೀ ಗುರುಚನ್ನಬಸವ ಸ್ವಾಮಿಗಳು, ನಾಂದ ಸಂಸ್ಥಾನ ಮಠದ ಸ್ವಸ್ತಿಶ್ರೀ ಜನಸೇನ ಭಟ್ಟಾರಕ ಪಟ್ಟಾಚಾರ್ಯ ಮಹಾಸ್ವಾಮೀಜಿ, ಪಂಡರಪುರದ ಹ.ಭ.ಪ. ಶ್ರೀ ಪ್ರಭುರಾಜ ವಾಸಕರ ಮಹಾರಾಜರು, ವಿಜಯಪುರ ಜ್ಞಾನಯೋಗಾಶ್ರಮದ ಪೂಜ್ಯ ಶ್ರೀ ಜ್ಞಾನಾನಂದ ಸ್ವಾಮಿಗಳು ಮತ್ತು ಚಿಂಚಲಿಯ ಪೂಜ್ಯ ಶ್ರೀ ಸಿದ್ಧಪ್ರಸಾದ ಸ್ವಾಮಿಗಳು ಪ್ರವಚನ ನೀಡಲಿದ್ದಾರೆ. ಈ ದಿನದ ಕಾರ್ಯಕ್ರಮವನ್ನು ಉಗಾರ ಸಕ್ಕರೆ ಕಾರ್ಖಾನೆಯ ವ್ಯವಸ್ಥಾಪಕ ನಿರ್ದೇಶಕ ಚಂದನಸಾಹೇಬ ಶಿರಗಾವಕರ ಉದ್ಘಾಟಿಸಲಿದ್ದು, ಮಾಜಿ ಸಚಿವ ಶ್ರೀಮಂತ ಪಾಟೀಲ ಮತ್ತು ಮಾಜಿ ಶಾಸಕ ಮಹೇಶ ಕುಮಟಳ್ಳಿ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ ಹಾಗೂ ವಿರೂಪಾಕ್ಷ ರಾ. ಹುಲ್ಲೊಳ್ಳಿ ದಾಸೋಹ ಸೇವೆ ಸಲ್ಲಿಸಲಿದ್ದಾರೆ.

ಏಪ್ರಿಲ್ 7ರ ಮಂಗಳವಾರದಂದು ‘ಆಹಾರ ಮತ್ತು ಆರೋಗ್ಯ’ ವಿಷಯದ ಕುರಿತು ಗೋಷ್ಠಿ ನಡೆಯಲಿದ್ದು, ಐನಾಪುರದ ಪೂಜ್ಯ ಶ್ರೀ ಬಸವೇಶ್ವರ ಸ್ವಾಮಿಗಳು, ಹುಲ್ಯಾಳದ ಪೂಜ್ಯ ಶ್ರೀ ಹರ್ಷಾನಂದ ಸ್ವಾಮಿಗಳು, ಬಾಲಗಾಂವನ ಪೂಜ್ಯ ಶ್ರೀ ಅಮೃತಾನಂದ ಸ್ವಾಮಿಗಳು, ಕಾಡಾಪೂರ ಸಿದ್ದಾರೂಢ ಮಠದ ಪೂಜ್ಯ ಶ್ರೀ ನಾಗಲಿಂಗ ಸ್ವಾಮಿಗಳು ಹಾಗೂ ಆಧ್ಯಾತ್ಮ ಚಿಂತಕ ಹ.ಭ.ಪ. ಶ್ರೀ ಸುಭಾಷ ಶೇವಾಳೆ ಮಹಾರಾಜರು ಸಾನಿಧ್ಯ ವಹಿಸಲಿದ್ದಾರೆ. ಈ ಸಂದರ್ಭದಲ್ಲಿ ಕೆ.ಎಲ್.ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ. ಪ್ರಭಾಕರ ಕೋರೆ, ಸ್ತ್ರೀರೋಗ ತಜ್ಞ ಡಾ. ಸೋಮಶೇಖರ ಪಾಟೀಲ ಮತ್ತು ನೇತ್ರ ತಜ್ಞ ಡಾ. ಕುನಾಲ ಪಾಟೀಲ ಅತಿಥಿಗಳಾಗಿ ಉಪಸ್ಥಿತರಿರಲಿದ್ದು, ನಾಗನಾಥ ಸಾಂಗಾಂವೆ ದಾಸೋಹದ ಜವಾಬ್ದಾರಿ ಹೊತ್ತಿದ್ದಾರೆ.

ಸಮಾರೋಪ ದಿನವಾದ ಏಪ್ರಿಲ್ 8ರ ಬುಧವಾರದಂದು ‘ಮಾತೃ-ಪಿತೃ ಭಕ್ತಿ’ ವಿಷಯದ ಕುರಿತು ಹಂಚನಾಳದ ಪೂಜ್ಯ ಶ್ರೀ ಮಹೇಶಾನಂದ ಸ್ವಾಮಿಗಳು, ಸಾಲೋಟಗಿಯ ಪೂಜ್ಯ ಶ್ರೀ ಸಂಗಮೇಶ್ವರ ಮಹಾಸ್ವಾಮಿಗಳು ಮತ್ತು ಚಿಕ್ಕಾಲಗುಂಡಿಯ ಪೂಜ್ಯ ಶ್ರೀ ಶರಣಾನಂದ ಸ್ವಾಮಿಗಳು ಪ್ರವಚನ ನೀಡಲಿದ್ದಾರೆ. ಈ ಸಮಾರಂಭವನ್ನು ಶಾಸಕ ಭರಮಗೌಡ (ರಾಜು) ಕಾಗೆ ಉದ್ಘಾಟಿಸಲಿದ್ದು, ವಿಧಾನ ಪರಿಷತ್ ಸದಸ್ಯ ಪ್ರಕಾಶ ಹುಕ್ಕೇರಿ ಮತ್ತು ಮಾಜಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರ ಸಮ್ಮುಖದಲ್ಲಿ ಗುರುದೇವ ವಿದ್ಯಾಲಯದ ವಿದ್ಯಾರ್ಥಿಗಳು ತಮ್ಮ ಹೆತ್ತವರ ಪಾದಪೂಜೆ ಮಾಡುವ ವಿಶೇಷ ಕಾರ್ಯಕ್ರಮ ಜರುಗಲಿದೆ. ಅಂದು ಪ್ರಕಾಶ ಅ. ರಾಜಮಾನೆ ಅವರು ದಾಸೋಹ ಸೇವೆ ನೀಡಲಿದ್ದು, ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕೆಂದು ಶ್ರೀ ಬಸವಲಿಂಗ ಸ್ವಾಮೀಜಿ ಕೋರಿದ್ದಾರೆ.

Tags:

error: Content is protected !!