ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲೂಕಿನ ಎಂ.ಕೆ. ಹುಬ್ಬಳ್ಳಿ ಮಲಪ್ರಭಾ ಸಕ್ಕರೆ ಕಾರ್ಖಾನೆ ಆವರಣದಲ್ಲಿರುವ ಉಪ ಅಂಚೆ ಕಚೇರಿಯನ್ನು ಯಾವುದೇ ಪೂರ್ವ ಸೂಚನೆ ನೀಡದೆ ದಿಢೀರ್ ವರ್ಗಾವಣೆ ಮಾಡುತ್ತಿರುವುದನ್ನು ಖಂಡಿಸಿ ಮಹಿಳೆಯರು ತೀವ್ರ ಪ್ರತಿಭಟನೆ ನಡೆಸಿದರು.
ಅಂಚೆ ಕಚೇರಿಯ ಮುಂದೆ ಜಮಾಯಿಸಿದ ನೂರಾರು ಮಹಿಳೆಯರು ಕಚೇರಿಗೆ ಬೀಗ ಹಾಕಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಸುಮಾರು 50 ವರ್ಷಗಳಿಂದ ಇದೇ ಸ್ಥಳದಲ್ಲಿ ಕಾರ್ಯನಿರ್ವಹಿಸುತ್ತಾ ಬಂದಿರುವ ಈ ಅಂಚೆ ಕಚೇರಿಯನ್ನು ಯಾವುದೇ ಮುನ್ಸೂಚನೆ ಇಲ್ಲದೆ ಸ್ಥಳಾಂತರಿಸುತ್ತಿರುವುದು ಸರಿಯಲ್ಲ ಎಂದು ಪ್ರತಿಭಟನಾಕಾರರು ದೂರಿದರು. ಇಲ್ಲಿನ ಖಾತೆದಾರರಾದ ಮಹಿಳೆಯರು ಹಾಗೂ ಕಾರ್ಮಿಕರಿಗೆ ಯಾವುದೇ ಲಿಖಿತ ಅಥವಾ ಮೌಖಿಕ ಮಾಹಿತಿ ನೀಡದೆ ಈ ನಿರ್ಧಾರ ಕೈಗೊಂಡಿರುವುದು ಅನ್ಯಾಯ ಎಂದು ಅವರು ಆರೋಪಿಸಿದರು.

ಈ ಸಕ್ಕರೆ ಕಾರ್ಖಾನೆಯಲ್ಲಿ ಕೆಲಸ ಮಾಡುವ ನೂರಾರು ಕಾರ್ಮಿಕರು ಹಾಗೂ ಸ್ಥಳೀಯ ಮಹಿಳೆಯರ ಉಳಿತಾಯ ಖಾತೆಗಳು ಈ ಅಂಚೆ ಕಚೇರಿಯಲ್ಲಿವೆ. ಕಾರ್ಖಾನೆಯ ಆವರಣದಲ್ಲಿಯೇ ಕಚೇರಿ ಇರುವುದರಿಂದ ಇಷ್ಟು ದಿನ ವ್ಯವಹಾರ ನಡೆಸಲು ಎಲ್ಲರಿಗೂ ಅನುಕೂಲವಿತ್ತು, ಆದರೆ ಈಗ ದೂರದ ಪ್ರದೇಶಕ್ಕೆ ಸ್ಥಳಾಂತರಿಸಿದರೆ ಗ್ರಾಮೀಣ ಭಾಗದ ಮಹಿಳೆಯರಿಗೆ ಮತ್ತು ವೃದ್ಧರಿಗೆ ದೊಡ್ಡ ಮಟ್ಟದ ತೊಂದರೆಯಾಗುತ್ತದೆ ಎಂದು ಪ್ರತಿಭಟನಾಕಾರರು ಅಳಲು ತೋಡಿಕೊಂಡರು. ಒಂದು ವೇಳೆ ಅಂಚೆ ಕಚೇರಿಯನ್ನು ಸ್ಥಳಾಂತರಿಸುವುದೇ ಆದಲ್ಲಿ, ಮೊದಲು ನಮ್ಮೆಲ್ಲಾ ಖಾತೆಗಳನ್ನು ಕ್ಲೋಸ್ ಮಾಡಿ ನಮ್ಮ ಹಣವನ್ನು ನಮಗೆ ಹಿಂತಿರುಗಿಸಬೇಕು, ಆ ನಂತರವೇ ಕಚೇರಿಯನ್ನು ವರ್ಗಾಯಿಸಬೇಕು ಎಂದು ಮಹಿಳೆಯರು ಪಟ್ಟು ಹಿಡಿದರು.
ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ನಂದಾ ಸಾಮಣೆ ಅವರು ಮಾತನಾಡಿ, ನಮ್ಮ ಹಣ ನಮಗೆ ನೀಡಿದ ನಂತರವೇ ಕಚೇರಿ ಸ್ಥಳಾಂತರವಾಗಲಿ ಎಂದು ಆಗ್ರಹಿಸಿದರೆ, ಜಯಶ್ರೀ ತುಕ್ಕಪನ್ನವರ ಅವರು ಅಂಚೆ ಕಚೇರಿ ವರ್ಗಾವಣೆಯಿಂದ ದೈನಂದಿನ ವ್ಯವಹಾರಗಳಿಗೆ ಆಗುವ ತೊಂದರೆಯ ಬಗ್ಗೆ ಕಳವಳ ವ್ಯಕ್ತಪಡಿಸಿದರು.
ಇದೇ ಸಂದರ್ಭದಲ್ಲಿ ಕಚೇರಿಗೆ ಹಾಕಿದ್ದ ಬೀಗವನ್ನು ತೆರೆಯಲು ರಾಣಿ ಶುಗರ್ ಕಾರ್ಖಾನೆಯ ಎಸ್‌ಒ ಪುಂಡಲೀಕ ಅವರು ಆಗಮಿಸಿ, ಎಂಡಿ ಅವರ ಸೂಚನೆ ಮೇರೆಗೆ ಬೀಗ ತೆರೆಯುವಂತೆ ಹೇಳಿದಾಗ ಮಹಿಳೆಯರೊಂದಿಗೆ ಮಾತಿನ ಚಕಮಕಿ ನಡೆದು ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಯಿತು. ಅಧಿಕಾರಿಗಳು ತಮ್ಮ ನಿರ್ಧಾರವನ್ನು ಬದಲಿಸದಿದ್ದರೆ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸುವುದಾಗಿ ಮಹಿಳೆಯರು ಈ ಸಂದರ್ಭದಲ್ಲಿ ಎಚ್ಚರಿಕೆ ನೀಡಿದರು.
