BELAGAVI

ಇರಾನ್-ಇಸ್ರೇಲ್ ವಾರ್ ಎಫೆಕ್ಟ್…

Share

ಮಧ್ಯಪ್ರಾಚ್ಯ ದೇಶಗಳ ಯುದ್ಧದ ಎಫೆಕ್ಟ್ ಈಗ ಬೆಳಗಾವಿಯ ಆಟೋ ಚಾಲಕರ ಮೇಲೂ ಬೀರುತ್ತಿದ್ದು, ಸಿ.ಎನ್.ಜಿ ಖಾಲಿಯಾಗಿ ನಡುರಸ್ತೆಯಿಂದ ಆಟೋಗಳನ್ನು ತಳ್ಳುಕೊಂಡು ಸ್ಟೇಷನ್ ವರೆಗೆ ಬರುವ ಪರಿಸ್ಥಿತಿ ಎದುರಾಗಿದೆ. ಅಲ್ಲದೇ, ಸ್ಟೇಷನ್’ನಲ್ಲಿ ಗಂಟೆಗಟ್ಟಲೇ ಉದ್ದನೆಯ ಸರತಿಯಲ್ಲಿ ನಿಂತರೂ ಸಿ.ಎನ್.ಜಿ ಸಿಗದ ಆಟೋ ಚಾಲಕರು ಬೇಗನೆ ಯುದ್ಧವನ್ನು ಮುಗಿಸಿ ಜನಸಾಮಾನ್ಯರನ್ನು ಬದುಕಲು ಬಿಡಿ ಎಂದು ಗೋಗರೆಯುತ್ತಿದ್ದಾರೆ. ಜನಪ್ರತಿನಿಧಿಗಳೇ ನಮ್ಮ ಸಂಕಷ್ಟಕ್ಕೆ ಸ್ಪಂದಿಸಿ ಎಂಬ ಆರ್ತನಾದ ಈಗ ಕೇಳಿ ಬರುತ್ತಿದೆ.

ಇರಾನ್-ಇಸ್ರೇಲ್ ವಾರ್ ಎಫೆಕ್ಟ್ ಕುಂದಾನಗರಿ ಬೆಳಗಾವಿಯ ಮೇಲೂ ಬೀರಿದೆ. ಸಿಎನ್‌ಜಿ ಪೂರೈಕೆ ಸಂಪೂರ್ಣ ವ್ಯತ್ಯಯಗೊಂಡಿದ್ದು, ಆಟೋ ರಿಕ್ಷಾ ಚಾಲಕರು ಬೀದಿಗೆ ಬೀಳುವಂತಾಗಿದೆ. ಈಗಾಗಲೇ ಶಕ್ತಿ ಯೋಜನೆಯಿಂದಾಗಿ ಪ್ರಯಾಣಿಕರಿಲ್ಲದೆ ಸಂಕಷ್ಟದಲ್ಲಿದ್ದ ಚಾಲಕರಿಗೆ, ಈಗ ಇಂಧನ ಕೊರತೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ನಗರದ ಬಹುತೇಕ ಸಿಎನ್‌ಜಿ ಪಂಪ್‌ಗಳಲ್ಲಿ ‘ನೋ ಸ್ಟಾಕ್’ ಬೋರ್ಡ್‌ಗಳು ರಾರಾಜಿಸುತ್ತಿದ್ದು, ಗ್ಯಾಸ್ ಸಿಗುವ ಕಡೆಗಳಲ್ಲಿ ದುಪ್ಪಟ್ಟು ಹಣ ವಸೂಲಿ ಮಾಡಲಾಗುತ್ತಿದೆ ಎಂಬ ಆರೋಪಗಳು ಕೇಳಿಬರುತ್ತಿವೆ. ಇಂಧನ ಖಾಲಿಯಾಗಿ ರಸ್ತೆಯಲ್ಲೇ ಆಟೋಗಳು ಸ್ಥಗಿತಗೊಳ್ಳುತ್ತಿರುವುದು ಚಾಲಕರ ಆಕ್ರೋಶಕ್ಕೆ ಕಾರಣವಾಗಿದೆ. ಸಿ.ಎನ್.ಜಿ ಸ್ಟೇಶನ್’ಗಳ ಮುಂದೆ ಆಟೋಗಳ ಉದ್ದನೇಯ ಕಿಲೋ ಮೀಟರ್ ಗಟ್ಟಲೆ ನಿಂತ ಸಾಲು ಸಮಸ್ಯೆಯನ್ನು ತೀವ್ರತೆಯನ್ನು ಎತ್ತಿ ತೋರಿಸುತ್ತಿದೆ.

ಮೊದಲೇ ಉಚಿತ ಬಸ್ ಸೇವೆಯಿಂದ ಆಟೋ ಚಾಲಕರು ಸಂಕಷ್ಟದಲ್ಲಿದ್ದಾರೆ. ಅಂತಹದ್ದರಲ್ಲಿ ಈಗ ಸಿ ಎನ್ ಜಿ ಕೊರತೆ ಆಟೋ ಚಾಲಕರ ಗಾಯದ ಮೇಲೆ ಬರೆಯನ್ನು ಎಳೆದಿದೆ. ನಗರದ ಸಿ.ಎನ್.ಜಿ ಪಂಪ್’ಗಳಲ್ಲಿ ಸಿ ಎನ್ ಜಿ ಸಿಗದಾಗಿದೆ. ಎಲ್ಲಿ ಸಿಗುತ್ತಿದೆ ಅಲ್ಲಿ ದುಪ್ಪಟ್ಟು ಹಣ ತೆರಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಎರಡೆರಡದು ಗಂಟೆ ಸರತಿಯಲ್ಲಿ ನಿಂತರೇ, ಪ್ರಯಾಣಿಕರನ್ನು ಕರೆದುಕೊಂಡು ಹೋಗುವುದು ಹೇಗೆ? ಬಹುಬೇಗನೆ ಯುದ್ಧವನ್ನು ಮುಗಿಸಿ ಜನರ ಸಮಸ್ಯೆಯನ್ನು ತಪ್ಪಿಸಬೇಕೆಂದು ಆಟೋ ಚಾಲಕರು ಆಗ್ರಹಿಸಿದರು.

ಭಾಜಿ ಮಾರ್ಕೇಟಿನಿಂದ ತರಕಾರಿ ಸಾಗಿಸುವಾಗ ಕೊಲ್ಹಾಪುರ ಸರ್ಕಲ್ ಹತ್ತಿರ ಸಿ.ಎನ್.ಜಿ, ಮುಗಿದಿದೆ. ಅಲ್ಲಿಂದ ರಿಕ್ಷಾವನ್ನು ಎಳೆದುಕೊಂಡು ಬರಬೇಕಾಗಿದೆ. ದಿನಕ್ಕೆ ಸಮರ್ಪಕವಾದ ಸಿ.ಎನ್.ಜಿ ಸಿಗದ ಕಾರಣ ರಿಕ್ಷಾ ಚಾಲಕರ ಬದುಕು ದುಸ್ತರವಾಗಿದೆ ಎಂದು ದೂರಿದರು.

ನಗರದಲ್ಲಿರುವ 4 ಸಿ.ಎನ್.ಜಿ ಸ್ಟೇಶನ್;ಗಳಲ್ಲಿ ಗ್ಯಾಸ್ ಇಲ್ಲದಾಗಿದೆ. ಆರ್.ಟಿ.ಓ ವೃತ್ತದಲ್ಲಿರುವ ಗೋ ಗ್ಯಾಸ್’ನಲ್ಲಿ ಮಾತ್ರ ಸಿ.ಎನ್.ಜಿ ದೊರೆಯುತ್ತಿದೆ. ಇದರಿಂದಾಗಿ ಸಿ.ಎನ್.ಜಿ ಮುಗಿದ ಸ್ಥಳದಿಂದ ಇಲ್ಲಿಯ ವರೆಗೆ ಆಟೋಗಳನ್ನು ತಳ್ಳುತ್ತ ತರಬೇಕಾಗಿದೆ. ಆಟೋ ರಿಕ್ಷಾ ಬಂದ್ ಆದರೇ, ನಮ್ಮ ಜೀವನ ನಮ್ಮ ಕುಟುಂಬಸ್ಥರ ಜೀವನ ತೊಂದರೆಗಿಡಾಗುತ್ತದೆ. ಬೆಳಗಾವಿಯ ಸಚಿವರು ಶಾಸಕರು ಜನಸಾಮಾನ್ಯರ ಸಮಸ್ಯೆಗಳನ್ನು ಸರ್ಕಾರದ ಮಟ್ಟದಲ್ಲಿ ತೆಗೆದುಕೊಂಡು ಹೋಗಿ ಪರಿಹರಿಸಬೇಕೆಂದು ಮನವಿ ಮಾಡಿದರು.

ಒಟ್ಟಾರೆ ಬೆಳಗಾವಿಯ ಮೇಲೂ ಮಧ್ಯಪ್ರಾಚ್ಯ ಯುದ್ಧದ ಪರಿಣಾಮ ಬಿರುತ್ತಿದ್ದು, ಬೇಗನೆ ಯುದ್ಧದ ಕಾರ್ಮೋಡ ದೂರವಾಗಿ ಶಾಂತಿ ನೆಲೆಸಿ ಜನಜೀವನ ಸುಗಮವಾಗಲಿ ಎಂಬುದು ಎಲ್ಲರ ಬಯಕೆಯಾಗಿದೆ.

Tags:

error: Content is protected !!