Tumkur

ಅಕ್ಷರ ದಾಸೋಹಿಯ 119ನೇ ಜನ್ಮ ಜಯಂತಿ: ಸಿದ್ದಗಂಗಾ ಕ್ಷೇತ್ರದಲ್ಲಿ ಭಕ್ತಿ ಸಾಗರ, ಭಾವಪರವಶರಾದ ಭಕ್ತರು

Share

ತ್ರಿವಿಧ ದಾಸೋಹಿ, ನಡೆದಾಡುವ ದೇವರು ಲಿಂಗೈಕ್ಯ ಡಾ. ಶ್ರೀ ಶಿವಕುಮಾರ ಸ್ವಾಮೀಜಿಯವರ 119ನೇ ಜನ್ಮ ದಿನೋತ್ಸವದ ಅಂಗವಾಗಿ ತುಮಕೂರಿನ ಸಿದ್ದಗಂಗಾ ಮಠದಲ್ಲಿಂದು ಹಬ್ಬದ ಸಂಭ್ರಮ ಮನೆಮಾಡಿದೆ. ಮುಂಜಾನೆಯಿಂದಲೇ ಶ್ರೀ ಮಠದಲ್ಲಿ ವಿವಿಧ ಧಾರ್ಮಿಕ ಕೈಂಕರ್ಯಗಳು ನೆರವೇರುತ್ತಿದ್ದು, ಭಕ್ತಸಾಗರವೇ ಹರಿದುಬರುತ್ತಿದೆ.

ಸಿದ್ಧಗಂಗಾ ಮಠದ ಮಠಾಧ್ಯಕ್ಷರಾದ ಶ್ರೀ ಸಿದ್ದಲಿಂಗ ಸ್ವಾಮೀಜಿಯವರು ಇಂದು ಮುಂಜಾನೆಯೇ ಇಷ್ಟಲಿಂಗ ಪೂಜೆ ಹಾಗೂ ವಿಶೇಷ ಧಾರ್ಮಿಕ ಕಾರ್ಯಕ್ರಮಗಳನ್ನು ನೆರವೇರಿಸುವ ಮೂಲಕ ಜನ್ಮ ದಿನೋತ್ಸವಕ್ಕೆ ಚಾಲನೆ ನೀಡಿದರು. ಲಿಂಗೈಕ್ಯ ಶ್ರೀಗಳ ಗದ್ದುಗೆಗೆ ವಿಶೇಷ ಅಭಿಷೇಕ ಮತ್ತು ಪುಷ್ಪಾರ್ಚನೆ ಮಾಡಲಾಗಿದ್ದು, ಮಠದ ಆವರಣದಲ್ಲಿ “ಜೈ ಸಿದ್ದಗಂಗಾ” ಎಂಬ ಜಯಘೋಷ ಮೊಳಗುತ್ತಿದೆ. ಅನ್ನದಾಸೋಹಿ, ಅಕ್ಷರ ದಾಸೋಹಿಗಳ ಸ್ಮರಣೆ ಮಾಡುತ್ತಾ ಭಕ್ತರು ಭಾವುಕರಾಗಿದ್ದು, ಶ್ರೀ ಮಠದ ಆಡಳಿತ ಮಂಡಳಿಯು ಭಕ್ತರ ದರ್ಶನಕ್ಕಾಗಿ ಸಕಲ ಸಿದ್ಧತೆಗಳನ್ನು ಕೈಗೊಂಡಿದೆ.

ಇದೇ ಸುಸಂದರ್ಭದಲ್ಲಿ ಶ್ರೀ ಶಿವಕುಮಾರ ಶಿವಯೋಗಿಗಳ ಪುತ್ಥಳಿ ಉತ್ಸವವು ಅತ್ಯಂತ ಅದ್ಧೂರಿಯಾಗಿ ಜರುಗಿತು. ಬೆಳಿಗ್ಗೆ 8 ಗಂಟೆಗೆ ಆರಂಭವಾದ ಈ ಮೆರವಣಿಗೆಗೆ ಶ್ರೀ ಸಿದ್ದಲಿಂಗ ಸ್ವಾಮೀಜಿಯವರು ಚಾಲನೆ ನೀಡಿದರು. ವಿವಿಧ ಮಠಾಧೀಶರು ಹಾಗೂ ಸಾವಿರಾರು ಭಕ್ತಾದಿಗಳ ಸಮ್ಮುಖದಲ್ಲಿ ಸಾಗಿದ ಮೆರವಣಿಗೆಯು ಅಟವಿ ಶಿವಯೋಗಿಗಳ ಗದ್ದುಗೆಗೆ ಅಂತ್ಯಗೊಂಡಿತು. ಮಠದ ಆವರಣವೆಲ್ಲಾ ಹಬ್ಬದ ಕಳೆಯನ್ನು ಹೊಂದಿದ್ದು, ಭಕ್ತಿ ಭಾವದ ಪರಾಕಾಷ್ಠೆ ಕಂಡುಬರುತ್ತಿದೆ.

Tags:

error: Content is protected !!