ಎಐಸಿಸಿ ಕಾರ್ಯದರ್ಶಿ ಹಾಗೂ ಖಾನಾಪುರದ ಮಾಜಿ ಶಾಸಕಿ ಡಾ. ಅಂಜಲಿ ನಿಂಬಾಳ್ಕರ್ ಅವರು ಪುದುಚೇರಿಯ ಆರ್ಯಕುಪ್ಪಂನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಬಿರುಸಿನ ಪ್ರಚಾರ ನಡೆಸುತ್ತಿದ್ದಾರೆ. ತಮ್ಮ ಅಭ್ಯರ್ಥಿಯ ಶೈಕ್ಷಣಿಕ ಅರ್ಹತೆ ಮತ್ತು ಸೇವಾ ಮನೋಭಾವವನ್ನು ಜನರ ಮುಂದಿಟ್ಟು ಅಂಜಲಿ ಅವರು ಭರ್ಜರಿ ಮತಬೇಟೆ ಆರಂಭಿಸಿದ್ದಾರೆ.

ಪುದುಚೇರಿ ಚುನಾವಣಾ ಉಸ್ತುವಾರಿಯಾಗಿರುವ ಡಾ. ಅಂಜಲಿ ನಿಂಬಾಳ್ಕರ್ ಅವರು ಆರ್ಯಕುಪ್ಪಂ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವಿಜಯಲಕ್ಷ್ಮೀ ಅವರ ಪರವಾಗಿ ಮನೆ ಮನೆಗೆ ತೆರಳಿ ಪ್ರಚಾರ ನಡೆಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, “ವಿಜಯಲಕ್ಷ್ಮೀ ಅವರು ಅತ್ಯಂತ ಸಭ್ಯ, ಮಾತೃ ಹೃದಯದ ಹಾಗೂ ಉನ್ನತ ಶಿಕ್ಷಣ ಪಡೆದ ಮಹಿಳೆಯಾಗಿದ್ದಾರೆ. ಅವರ ಪತಿಯು ಶಾಸಕರಾಗಿ ಮಾಡಿದ ಜನಪರ ಕೆಲಸಗಳು ಶ್ಲಾಘನೀಯ. ಪತಿಯ ನಿಧನದ ನಂತರವೂ ವಿಜಯಲಕ್ಷ್ಮೀ ಅವರು ಕ್ಷೇತ್ರದ ಜನರ ಕಷ್ಟಸುಖಗಳಿಗೆ ಸ್ಪಂದಿಸುತ್ತಾ ಜನರ ಮನ ಗೆದ್ದಿದ್ದಾರೆ. ಆದ್ದರಿಂದ ಈ ಕ್ರೀಯಾಶೀಲ ಮಹಿಳಾ ಅಭ್ಯರ್ಥಿಯನ್ನು ಪ್ರಚಂಡ ಬಹುಮತದಿಂದ ಆರಿಸಿ ತರಬೇಕು” ಎಂದು ಮನವಿ ಮಾಡಿದರು. ಡಾ. ಅಂಜಲಿ ಅವರ ಆಗಮನದಿಂದ ಸ್ಥಳೀಯ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಹೊಸ ಉತ್ಸಾಹ ಮೂಡಿದ್ದು, ಪ್ರಚಾರ ಕಾರ್ಯಕ್ಕೆ ಸಾರ್ವಜನಿಕರಿಂದ ವ್ಯಾಪಕ ಬೆಂಬಲ ವ್ಯಕ್ತವಾಗಿದೆ.

