ಬೆಳಗಾವಿಯ ಓಂಕಾರ ನಗರದಲ್ಲಿ ಮನಕಲಕುವ ಘಟನೆಯೊಂದು ನಡೆದಿದೆ. ಪಕ್ಕದ ಮನೆಯವರು ಪ್ರೀತಿಯಿಂದ ಸಾಕಿದ್ದ ನಾಯಿಗೆ ಆಹಾರ ನೀಡಲು ಹೋದ ವ್ಯಕ್ತಿಯ ಮೇಲೆ ಅದೇ ನಾಯಿ ಮಾರಣಾಂತಿಕ ದಾಳಿ ನಡೆಸಿದ್ದು, ಗಾಯಾಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಬೆಳಗಾವಿ ಓಂಕಾರ ನಗರದಲ್ಲಿ ಪಕ್ಕದ ಮನೆಯವರು ಸಾಕು ನಾಯಿಯನ್ನು ನೋಡಿಕೊಳ್ಳಲು ಬಿಟ್ಟು ಹೋಗಿದ್ದ ವೇಳೆ, ಅದಕ್ಕೆ ಬಿಸ್ಕೆಟ್ ಹಾಕಲು ಹೋದ ತಾವರಪ್ಪ ಲಮಾಣಿ (48) ಮೇಲೆ ನಾಯಿ ದಾಳಿ ನಡೆಸಿದೆ.ದಾಳಿಯಿಂದ ತಾವರಪ್ಪ ಅವರಿಗೆ ಕೈ, ಕಾಲು ಸೇರಿದಂತೆ ದೇಹದ ಹಲವು ಭಾಗಗಳಲ್ಲಿ ಗಂಭೀರ ಗಾಯಗಳಾಗಿವೆ. ಗಾಯಾಳುವನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಬಿಮ್ಸ್ ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಬೀದಿ ನಾಯಿಗಳ ಹಾವಳಿ ಸ್ಥಳೀಯರಲ್ಲಿ ಆತಂಕ ಮೂಡಿಸಿದ್ದು, ಸಾಕು ಪ್ರಾಣಿಗಳನ್ನು ಜವಾಬ್ದಾರಿಯಿಂದ ನೋಡಿಕೊಳ್ಳುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.
