• ಬಾಗಲಕೋಟೆ ಉಪಚುನಾವಣೆಯಲ್ಲಿ ಮಹಿಳಾ ಕಾಂಗ್ರೆಸ್ ಹವಾ
• ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಸೌಮ್ಯ ರೆಡ್ಡಿ ಎಂಟ್ರಿ
• ದೀಪಾ ಪಾಟೀಲ ಮತ್ತು ತಂಡದಿಂದ ಬಿರುಸಿನ ಮತಯಾಚನೆ
• ಮಹಿಳಾ ಸಬಲೀಕರಣದ ಮಂತ್ರ ಜಪಿಸಿದ ಕೈ ನಾಯಕಿಯರು
ಬಾಗಲಕೋಟೆ ಉಪಚುನಾವಣೆಯ ಕಣ ಈಗ ದಿನದಿಂದ ದಿನಕ್ಕೆ ರಂಗೇರುತ್ತಿದೆ. ಕಾಂಗ್ರೆಸ್ ಅಭ್ಯರ್ಥಿಯ ಗೆಲುವಿಗಾಗಿ ಮಹಿಳಾ ಕಾಂಗ್ರೆಸ್ ಪಡೆಯು ಈಗ ಅಖಾಡಕ್ಕಿಳಿದಿದ್ದು, ಕೆಪಿಸಿಸಿ ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ಸೌಮ್ಯ ರೆಡ್ಡಿ ಅವರ ನೇತೃತ್ವದಲ್ಲಿ ಓಣಿ ಓಣಿಗಳಲ್ಲಿ ಅಬ್ಬರದ ಪ್ರಚಾರ ನಡೆಸಲಾಗುತ್ತಿದೆ.
ಬಾಗಲಕೋಟೆ ವಿಧಾನಸಭಾ ಉಪಚುನಾವಣೆಯ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷದ ಪರವಾಗಿ ಮಹಿಳಾ ಘಟಕವು ಭರ್ಜರಿ ಪ್ರಚಾರ ಕಾರ್ಯ ಕೈಗೊಂಡಿದೆ. ಕೆಪಿಸಿಸಿ ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ಸೌಮ್ಯ ರೆಡ್ಡಿ ಅವರು ಇಂದು ಪ್ರಚಾರ ಕಣಕ್ಕೆ ಧುಮುಕಿದ್ದು, ಕಾರ್ಯಕರ್ತರಲ್ಲಿ ಹೊಸ ಹುಮ್ಮಸ್ಸು ತುಂಬಿದ್ದಾರೆ. ಬೆಳಗಾವಿ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಅಶ್ವಿನಿ ಬೆಳವಡಿ ಹಾಗೂ ಖಾನಾಪುರ ತಾಲೂಕು ಗ್ರಾಮೀಣ ಘಟಕದ ಅಧ್ಯಕ್ಷೆ ದೀಪಾ ಪಾಟೀಲ ಅವರನ್ನೊಳಗೊಂಡ ಬಲಿಷ್ಠ ತಂಡವು ಬಾಗಲಕೋಟೆಯ ಗಲ್ಲಿ ಗಲ್ಲಿಗಳಲ್ಲಿ ಸಂಚರಿಸಿ ಮತದಾರರ ಮನ ಗೆಲ್ಲಲು ಕಸರತ್ತು ನಡೆಸಿತು.
ಮನೆ ಮನೆಗೆ ತೆರಳಿದ ಕಾಂಗ್ರೆಸ್ ನಾಯಕಿಯರು, ರಾಜ್ಯದ ಕಾಂಗ್ರೆಸ್ ಸರ್ಕಾರವು ಮಹಿಳೆಯರ ಸಬಲೀಕರಣಕ್ಕಾಗಿ ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆಗಳು ಹಾಗೂ ದೀನ ದಲಿತರ ಪರವಾದ ಕಾರ್ಯಕ್ರಮಗಳ ಕುರಿತು ಜನರಿಗೆ ಮನವರಿಕೆ ಮಾಡಿಕೊಟ್ಟರು. “ಕಾಂಗ್ರೆಸ್ ಸರ್ಕಾರವು ಮಹಿಳೆಯರ ಆರ್ಥಿಕ ಸ್ವಾತಂತ್ರ್ಯಕ್ಕೆ ಹೆಚ್ಚಿನ ಒತ್ತು ನೀಡಿದೆ, ಈ ಅಭಿವೃದ್ಧಿ ಮುಂದುವರಿಯಲು ಕಾಂಗ್ರೆಸ್ ಅಭ್ಯರ್ಥಿಯನ್ನು ಪ್ರಚಂಡ ಬಹುಮತದಿಂದ ಗೆಲ್ಲಿಸಬೇಕು” ಎಂದು ಮತದಾರರಲ್ಲಿ ಮನವಿ ಮಾಡಿದರು. ಖಾನಾಪುರ ಮತ್ತು ಬೆಳಗಾವಿಯ ಪ್ರಮುಖ ಮಹಿಳಾ ಮುಖಂಡರ ಉಪಸ್ಥಿತಿಯು ಪ್ರಚಾರಕ್ಕೆ ಹೆಚ್ಚಿನ ಶಕ್ತಿ ತುಂಬಿದ್ದು, ಮತದಾರರಿಂದಲೂ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ.
Bagalkote
ಬಾಗಲಕೋಟೆಯಲ್ಲಿ ಕೈ ನಾಯಕಿಯರ ಅಬ್ಬರದ ಪ್ರಚಾರ: ಸೌಮ್ಯ ರೆಡ್ಡಿ ಸಾಥ್, ಮನೆ ಮನೆಗೆ ತೆರಳಿ ಮತಯಾಚನೆ
