Bagalkot

ಮೇಟಿ ಬಿಟ್ಟುಹೋದ ಕೆಲಸ ಪೂರ್ಣಗೊಳಿಸಲು ಉಮೇಶ್ ಮೇಟಿಯನ್ನು ಗೆಲ್ಲಿಸಿ – ಸಿಎಂ ಸಿದ್ದರಾಮಯ್ಯ ಕರೆ

Share

ಬಾಗಲಕೋಟೆ ವಿಧಾನಸಭಾ ಉಪಚುನಾವಣೆಯ ಪ್ರಚಾರ ಕಣ ರಂಗೇರಿದೆ. ಸುತಗುಂಡಾರ ಗ್ರಾಮದಲ್ಲಿ ನಡೆದ ಬೃಹತ್ ಸಮಾವೇಶದಲ್ಲಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಬಿಜೆಪಿಯವರು ಕೇವಲ ಲೂಟಿ ಮಾಡಿದ್ದಾರೆಯೇ ಹೊರತು ಯಾವುದೇ ಅಭಿವೃದ್ಧಿ ಮಾಡಿಲ್ಲ. ದಿವಂಗತ ಹೆಚ್.ವೈ. ಮೇಟಿ ಅವರ ಜನಪರ ಆಶಯಗಳನ್ನು ಮುಂದುವರಿಸಲು ಅವರ ಪುತ್ರ ಉಮೇಶ್ ಮೇಟಿಯವರನ್ನು ಅತಿ ಹೆಚ್ಚಿನ ಮತಗಳ ಅಂತರದಿಂದ ಗೆಲ್ಲಿಸುವಂತೆ ಮತದಾರರಲ್ಲಿ ಮನವಿ ಮಾಡಿದರು.

ಸಭೆಯನ್ನುದ್ದೇಶಿಸಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, “ಈ ಉಪಚುನಾವಣೆ ಆಕಸ್ಮಿಕವಾಗಿ ಬಂದಿದ್ದು, ಹೆಚ್.ವೈ. ಮೇಟಿ ಅವರ ನಿಧನ ನಮಗೆಲ್ಲರಿಗೂ ದೊಡ್ಡ ನಷ್ಟವಾಗಿದೆ. ಮೇಟಿ ಅವರು 5 ಬಾರಿ ಶಾಸಕರಾಗಿ, ಸಂಸದರಾಗಿ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಿದವರು. ಕಾಂಗ್ರೆಸ್ ಪಕ್ಷದ ಸಂಪ್ರದಾಯದಂತೆ ಅವರ ಕುಟುಂಬದ ಉಮೇಶ್ ಮೇಟಿಗೆ ಟಿಕೆಟ್ ನೀಡಲಾಗಿದೆ. ಬಾಗಲಕೋಟೆಗೆ ವೈದ್ಯಕೀಯ ಕಾಲೇಜು ಮಂಜೂರಾಗಲು ಮೇಟಿ ಅವರ ನಿರಂತರ ಒತ್ತಾಯವೇ ಕಾರಣ. ಈಗ ಕೇವಲ ಮೆಡಿಕಲ್ ಕಾಲೇಜು ಮಾತ್ರವಲ್ಲದೆ, ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಹಾಗೂ ಟ್ರಾಮಾ ಸೆಂಟರ್ ಅನ್ನೂ ನಾವು ನಿರ್ಮಿಸುತ್ತೇವೆ” ಎಂದು ಭರವಸೆ ನೀಡಿದರು.

ಇದೇ ವೇಳೆ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ಸಿಎಂ, “ಬಿಜೆಪಿಯವರು ಕೇವಲ ಲೂಟಿ ಮಾಡಿದ್ದಾರೆಯೇ ಹೊರತು ಯಾವುದೇ ಅಭಿವೃದ್ಧಿ ಮಾಡಿಲ್ಲ. ಯುಕೆಪಿ ಮೂರನೇ ಹಂತದ ಯೋಜನೆಗೆ ಸಂಬಂಧಿಸಿದಂತೆ 13 ವರ್ಷಗಳಾದರೂ ಕೇಂದ್ರ ಸರ್ಕಾರ ಗೆಜೆಟ್ ನೋಟಿಫಿಕೇಶನ್ ಹೊರಡಿಸದೆ ರೈತರಿಗೆ ಅನ್ಯಾಯ ಮಾಡುತ್ತಿದೆ. ನಾವು ಅಧಿಕಾರಕ್ಕೆ ಬಂದ ಮೇಲೆ ನೀರಾವರಿ ಜಮೀನಿಗೆ 40 ಲಕ್ಷ ಹಾಗೂ ಒಣ ಭೂಮಿಗೆ 30 ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದೇವೆ. ಬಿಜೆಪಿಯವರು ಗೆಜೆಟ್ ನೋಟಿಫಿಕೇಶನ್ ಮಾಡಿಸಿ ಆಮೇಲೆ ಮತ ಕೇಳಲು ಬರಲಿ” ಎಂದು ಸವಾಲು ಹಾಕಿದರು.

ಸರ್ಕಾರದ ಗ್ಯಾರಂಟಿ ಯೋಜನೆಗಳ ಬಗ್ಗೆ ಹೆಮ್ಮೆಯಿಂದ ಮಾತನಾಡಿದ ಅವರು, “ನಮ್ಮ ಸರ್ಕಾರ ನುಡಿದಂತೆ ನಡೆಯುವ ಸರ್ಕಾರ. ಪ್ರತಿ ವರ್ಷ ಗ್ಯಾರಂಟಿಗಳಿಗಾಗಿ 52 ಸಾವಿರ ಕೋಟಿ ರೂಪಾಯಿ ಖರ್ಚು ಮಾಡುತ್ತಿದ್ದೇವೆ. 1 ಕೋಟಿ 26 ಲಕ್ಷ ಮಹಿಳೆಯರಿಗೆ ಗೃಹಲಕ್ಷ್ಮಿ ಹಣ ತಲುಪುತ್ತಿದೆ. ಶಕ್ತಿ ಯೋಜನೆಯಿಂದ ಮಹಿಳೆಯರು ಆರ್ಥಿಕವಾಗಿ ಸಬಲರಾಗುತ್ತಿದ್ದಾರೆ. ಬಿಜೆಪಿಯವರು ಈ ಯೋಜನೆಗಳನ್ನು ವಿರೋಧಿಸಿ ಈಗ ಮುಖಭಂಗ ಅನುಭವಿಸುತ್ತಿದ್ದಾರೆ. ನನ್ನ ಕೈ ಬಲಪಡಿಸಲು ಮತ್ತು ಮೇಟಿಯವರ ಆತ್ಮಕ್ಕೆ ಶಾಂತಿ ಸಿಗಲು ನಂಬರ್ 1 ಬಟನ್ ಒತ್ತಿ ಉಮೇಶ್ ಮೇಟಿಯವರನ್ನು ವಿಧಾನಸಭೆಗೆ ಕಳುಹಿಸಿ” ಎಂದು ಮನವಿ ಮಾಡಿದರು.

Tags:

error: Content is protected !!