ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಮೇಖಳಿ ಗ್ರಾಮದಲ್ಲಿ ನಡೆದ ಭೀಕರ ರಸ್ತೆ ಅಪಘಾತಕ್ಕೆ ಇಬ್ಬರು ಮುಗ್ಧ ಸಹೋದರಿಯರು ಬಲಿಯಾಗಿದ್ದಾರೆ. ಶಾಲೆಯಿಂದ ಮನೆಗೆ ಮರಳುತ್ತಿದ್ದಾಗ ಯಮನಂತೆ ಬಂದ ಕಾರು ಇಬ್ಬರು ವಿದ್ಯಾರ್ಥಿನಿಯರ ಜೀವವನ್ನೇ ಬಲಿಪಡೆದಿದೆ.
ಮೇಖಳಿ ಗ್ರಾಮದ ನಿವಾಸಿಗಳಾದ 11 ವರ್ಷದ ಜನಶ್ರೀ ಕೋಟರೇ ಹಾಗೂ 13 ವರ್ಷದ ಭಾಗ್ಯಶ್ರೀ ಕೋಟರೇ ಮೃತಪಟ್ಟ ದುರ್ದೈವಿ ಸಹೋದರಿಯರು. ಕಳೆದ ಐದು ದಿನಗಳ ಹಿಂದೆ ಶಾಲೆಯಿಂದ ನಡೆದುಕೊಂಡು ಮನೆಗೆ ಬರುತ್ತಿದ್ದ ವೇಳೆ ಅತಿವೇಗವಾಗಿ ಬಂದ ಕಾರು ಇವರ ಮೇಲೆ ಹರಿದಿತ್ತು. ಅಪಘಾತದ ತೀವ್ರತೆಗೆ ಜನಶ್ರೀ ಘಟನಾ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದರೆ, ಗಂಭೀರವಾಗಿ ಗಾಯಗೊಂಡಿದ್ದ ಭಾಗ್ಯಶ್ರೀ ಬೆಳಗಾವಿಯ ಆಸ್ಪತ್ರೆಯಲ್ಲಿ ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಳು. ಆದರೆ ಇಂದು ಚಿಕಿತ್ಸೆ ಫಲಕಾರಿಯಾಗದೆ ಭಾಗ್ಯಶ್ರೀ ಕೂಡ ಸಾವನ್ನಪ್ಪಿದ್ದು, ಇಡೀ ಕುಟುಂಬ ಕಣ್ಣೀರಿನಲ್ಲಿ ಮುಳುಗಿದೆ. ಒಂದೇ ಕುಟುಂಬದ ಇಬ್ಬರು ಹೆಣ್ಣುಮಕ್ಕಳನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದ್ದು, ಗ್ರಾಮಸ್ಥರಲ್ಲಿ ತೀವ್ರ ಶೋಕ ಆವರಿಸಿದೆ. ಈ ಭೀಕರ ಅಪಘಾತಕ್ಕೆ ಕಾರು ಚಾಲಕನ ನಿರ್ಲಕ್ಷ್ಯವೇ ಕಾರಣ ಎಂದು ಹೇಳಲಾಗುತ್ತಿದೆ.
ಸದ್ಯ ಈ ಘಟನೆಗೆ ಸಂಬಂಧಿಸಿದಂತೆ ರಾಯಬಾಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಕಾರು ಚಾಲಕನ ವಿರುದ್ಧ ತನಿಖೆ ಚುರುಕುಗೊಳಿಸಿದ್ದಾರೆ.
