BELAGAVI

ಮುತಗಾದಲ್ಲಿ ಕುಸ್ತಿ ಹಂಗಾಮಾ: ಇರಾನ್ ಪೈಲ್ವಾನನಿಗೆ ಮಣ್ಣು ಮುಕ್ಕಿಸಿದ ಕೊಲ್ಲಾಪುರದ ಕೇಸರಿ ಜಯದೀಪ್ ಪಾಟೀಲ್!

Share

ಬೆಳಗಾವಿ ತಾಲೂಕಿನ ಮುತಗಾ ಗ್ರಾಮದ ಹನುಮಾನ್ ಯಾತ್ರೋತ್ಸವದ ನಿಮಿತ್ತ ಹಮ್ಮಿಕೊಳ್ಳಲಾಗಿದ್ದ ಅಂತರಾಷ್ಟ್ರೀಯ ಮಟ್ಟದ ಕುಸ್ತಿ ಮೈದಾನದಲ್ಲಿ ಭಾರತೀಯ ಪೈಲ್ವಾನರ ಅಬ್ಬರ ಕಂಡುಬಂತು. ಇರಾನ್‌ನ ಪ್ರಬಲ ಪೈಲ್ವಾನನನ್ನು ಮಣಿಸುವ ಮೂಲಕ ಕೊಲ್ಲಾಪುರದ ಮಲ್ಲ ಜಯದೀಪ್ ಪಾಟೀಲ್ ಮುತಗಾ ಮೈದಾನದ ಕಿಂಗ್ ಆಗಿ ಹೊರಹೊಮ್ಮಿದ್ದಾರೆ.

ಮುತಗಾದ ಹನುಮಾನ್ ಕುಸ್ತಿ ಸಂಘಟನೆ ಮತ್ತು ಗ್ರಾಮಸ್ಥರ ಸಹಯೋಗದಲ್ಲಿ ದಮನಿ ಕೆರೆಯ ಆವರಣದಲ್ಲಿ ಆಯೋಜಿಸಲಾಗಿದ್ದ ಈ ಅಂತರಾಷ್ಟ್ರೀಯ ಕುಸ್ತಿ ಮೈದಾನವು ಕ್ರೀಡಾಭಿಮಾನಿಗಳ ಹರ್ಷೋದ್ಗಾರಕ್ಕೆ ಸಾಕ್ಷಿಯಾಯಿತು. ಮೈದಾನದ ಪ್ರಮುಖ ಆಕರ್ಷಣೆಯಾಗಿದ್ದ ಮೊದಲನೇ ನಂಬರ್‌ನ ಕುಸ್ತಿಯಲ್ಲಿ ಕೊಲ್ಲಾಪುರದ ಗಂಗಾವೇಸ್ ತಾಲೀಮಿನ ಉದಯೋನ್ಮುಖ ಮಲ್ಲ ಜಯದೀಪ್ ಪಾಟೀಲ್ ಮತ್ತು ಇರಾನ್‌ನ ಅಂತರಾಷ್ಟ್ರೀಯ ಪೈಲ್ವಾನ ಇರ್ಫಾನ್ ನಡುವೆ ರೋಚಕ ಹೋರಾಟ ನಡೆಯಿತು. ಸುಮಾರು 26 ನಿಮಿಷಗಳ ಕಾಲ ನಡೆದ ಈ ಭೀಕರ ಹಣಾಹಣಿಯಲ್ಲಿ ಜಯದೀಪ್ ಪಾಟೀಲ್ ಅವರು ‘ಬಾಹೇರಿಲ್ ಟಾಂಗ್’ (ಹೊರಗಿನ ಕಾಲು ಹಾಕುವ) ಪಟ್ಟು ಹಾಕುವ ಮೂಲಕ ಇರಾನ್ ಪೈಲ್ವಾನನನ್ನು ಅಕ್ಷರಶಃ ಅಸ್ಮಾನ್ ತೋರಿಸಿ ವಿಜಯ ಮಾಲೆ ಧರಿಸಿದರು.

ಇನ್ನು ಎರಡನೇ ಕ್ರಮಾಂಕದ ಕುಸ್ತಿಯಲ್ಲಿ ಪುಣೆಯ ಸಚಿನ್ ಥೋಂಬ್ರೆ ಮತ್ತು ಪಂಜಾಬ್‌ನ ಗೋಗಿಸಿಂಗ್ ನಡುವೆ ಪ್ರಬಲ ಪೈಪೋಟಿ ಏರ್ಪಟ್ಟಿತ್ತು. ಸಚಿನ್ ಥೋಂಬ್ರೆ ಅವರು ತಮ್ಮ ಚಾಣಾಕ್ಷತನದ ಮೂಲಕ ಗೋಗಿಸಿಂಗ್ ಅವರನ್ನು ಮಣಿಸಿ ಮೈದಾನದ ಎರಡನೇ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು. ಮೂರನೇ ಕ್ರಮಾಂಕದಲ್ಲಿ ದೆಹಲಿಯ ಕರಣ್ ಅವರು ದಡ್ಡಿ ಗ್ರಾಮದ ಶಿವ ಅವರನ್ನು ಕೇವಲ ಒಂದೇ ನಿಮಿಷದಲ್ಲಿ ‘ಕೊಂದಣ್ ಏಕಚಾಕ್’ ಪಟ್ಟು ಹಾಕಿ ಮಣ್ಣು ಮುಕ್ಕಿಸಿದರು. ಇದಲ್ಲದೆ ನೇಪಾಳದ ದೇವ್ ಥಾಪಾ ಅವರ ಮನರಂಜನಾತ್ಮಕ ಕುಸ್ತಿ ಪ್ರೇಕ್ಷಕರನ್ನು ರಂಜಿಸುವಲ್ಲಿ ಯಶಸ್ವಿಯಾಯಿತು.

ಸಂಪೂರ್ಣ ಮೈದಾನದಲ್ಲಿ ಒಟ್ಟು 60ಕ್ಕೂ ಹೆಚ್ಚು ಜಿದ್ದಾಜಿದ್ದಿನ ಕುಸ್ತಿಗಳು ನಡೆದವು. ಸ್ಥಳೀಯ ಮಲ್ಲ ಮುತಗಾದ ಭೂಮಿಪುತ್ರ ಅವರು ಚಿಕ್ಕೋಡಿಯ ಅನಿಲ್ ಅವರನ್ನು ಚಿತ್ ಮಾಡಿ ಗಮನ ಸೆಳೆದರೆ, ದಾದಾ ಕೋಳೆಕರ್ ಅವರು ‘ಹಪ್ತಾ’ ಪಟ್ಟು ಹಾಕಿ ದೆಹಲಿಯ ಆಯುಷ್ ಅವರನ್ನು ಪರಾಭವಗೊಳಿಸಿದರು. ಮೈದಾನದ ಪಂಚರಾಗಿ ನವೀನ್ ಪಾಟೀಲ್, ಭಾವಕಣ್ಣ ಪಾಟೀಲ್ ಸೇರಿದಂತೆ ಹಲವು ಹಿರಿಯರು ಕಾರ್ಯನಿರ್ವಹಿಸಿದರು. ಗ್ರಾಮ ಪಂಚಾಯತ್, ಗ್ರಾಮ ಸುಧಾರಣಾ ಮಂಡಳಿ ಹಾಗೂ ದೇವಸ್ಥಾನ ಕಮಿಟಿಯ ಪದಾಧಿಕಾರಿಗಳ ಸಮ್ಮುಖದಲ್ಲಿ ವಿಜೇತ ಮಲ್ಲರಿಗೆ ಬಹುಮಾನ ವಿತರಿಸಿ ಗೌರವಿಸಲಾಯಿತು.

Tags:

error: Content is protected !!