ಬೆಳಗಾವಿ ನಗರದ ಕುಮಾರಸ್ವಾಮಿ ಬಡಾವಣೆಯಲ್ಲಿ ಪರಿಸರಕ್ಕೆ ದೊಡ್ಡ ಹೊಡೆತ ನೀಡುವಂತಹ ಅಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಜಾಗೆಯ ಮಾಲೀಕರ ಗಮನಕ್ಕೆ ತರದೆ, ರಾತ್ರೋರಾತ್ರಿ ಲಕ್ಷಾಂತರ ರೂ. ಮೌಲ್ಯದ ಸಾಗವಾಣಿ ಮರಗಳನ್ನು ಕಟಾವು ಮಾಡಿದ್ದಾರೆ.

ಮಧು ಪಾಟೀಲ್ ಎಂಬ ರೈತರು ಕಳೆದ 1990ರಿಂದ ತಮ್ಮ ಜಾಗೆಯಲ್ಲಿ ಶ್ರಮಪಟ್ಟು ಸುಮಾರು 700 ಸಾಗವಾಣಿ ಮರಗಳನ್ನು ಬೆಳೆಸಿದ್ದರು. ಹಲವು ವರ್ಷಗಳ ಪರಿಶ್ರಮದಿಂದ ಬೆಳೆದ ಈ ಮರಗಳು ಪರಿಸರದ ಸಮತೋಲನಕ್ಕೂ, ಆರ್ಥಿಕ ಮೌಲ್ಯಕ್ಕೂ ಮಹತ್ವ ಹೊಂದಿದ್ದವು. ಆದರೆ, ಕಿಡಿಗೇಡಿಗಳು ಅವರ ಗಮನಕ್ಕೆ ತರದೆ ರಾತ್ರಿ ಸಮಯದಲ್ಲಿ ಅಕ್ರಮವಾಗಿ ಪ್ರವೇಶಿಸಿ, 90ಕ್ಕೂ ಹೆಚ್ಚು ಮರಗಳನ್ನು ಕತ್ತರಿಸಿ ನಾಶಪಡಿಸಿದ್ದಾರೆ.
ಈ ಘಟನೆ ಕೇವಲ ಆರ್ಥಿಕ ನಷ್ಟವಷ್ಟೇ ಅಲ್ಲ, ಪರಿಸರದ ಮೇಲಿನ ದೊಡ್ಡ ದಾಳಿಯಾಗಿದೆ ಎಂದು ಪರಿಸರ ಪ್ರೇಮಿಗಳು ಅಭಿಪ್ರಾಯಪಟ್ಟಿದ್ದಾರೆ. ಇಷ್ಟು ದೊಡ್ಡ ಪ್ರಮಾಣದಲ್ಲಿ ಮರಗಳನ್ನು ಕಡಿದುಕೊಂಡು ಹೋಗಿದ್ದರೂ ಸಂಬಂಧಿಸಿದ ಅರಣ್ಯ ಇಲಾಖೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂಬ ಆರೋಪವೂ ಕೇಳಿಬಂದಿದೆ.
ಸ್ಥಳೀಯ ನಿವಾಸಿಗಳು ಮತ್ತು ಪರಿಸರ ಹೋರಾಟಗಾರರು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ಆರೋಪಿಗಳನ್ನು ಶೀಘ್ರವೇ ಪತ್ತೆಹಚ್ಚಿ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. ಜೊತೆಗೆ, ಇಂತಹ ಘಟನೆಗಳು ಮರುಕಳಿಸದಂತೆ ಸೂಕ್ತ ಭದ್ರತಾ ಕ್ರಮಗಳನ್ನು ಜಾರಿಗೆ ತರಬೇಕೆಂದು ಒತ್ತಾಯಿಸಿದ್ದಾರೆ.
ಈ ಘಟನೆ ನಗರದಲ್ಲಿ ಅಕ್ರಮ ಮರಕಟಾವು ಜಾಲವಿದೆ ಎಂಬ ಶಂಕೆಯನ್ನು ಜಾಗೆಯ ಮಾಲೀಕ ಮಧು ಪಾಟೀಲ್ ಶಂಕಿಸಿದ್ದಾರೆ.
