ಬೇಸಿಗೆಯ ಬಿಸಿಲಿಗೆ ತತ್ತರಿಸುತ್ತಿರುವ ಬೆಳಗಾವಿ ಜಿಲ್ಲೆಯ ಜನತೆಗೆ ಸಮಾಧಾನಕರ ಸುದ್ದಿಯೊಂದು ಬಂದಿದೆ. ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಅವರು ಹಿಡಕಲ್ ಜಲಾಶಯದಿಂದ ಕುಡಿಯುವ ನೀರು ಬಿಡುಗಡೆ ಮಾಡಲು ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ. ಚುನಾವಣಾ ಆಯೋಗದ ಅನುಮತಿ ಪಡೆದು ನೀರು ಹರಿಸಲು ದಿನಾಂಕ ನಿಗದಿಪಡಿಸಲಾಗಿದೆ.
ಲೋಕೋಪಯೋಗಿ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಅವರು ಪ್ರತಿ ವರ್ಷದಂತೆ ಈ ಬಾರಿಯೂ ಕುಡಿಯುವ ನೀರಿನ ಸಮಸ್ಯೆ ನೀಗಿಸಲು ಹಿಡಕಲ್ ಡ್ಯಾಂನಿಂದ ನೀರು ಬಿಡುವ ನಿರ್ಧಾರ ಪ್ರಕಟಿಸಿದ್ದಾರೆ. ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವ ಹಿನ್ನೆಲೆಯಲ್ಲಿ ಚುನಾವಣಾಧಿಕಾರಿಗಳ ಅನುಮತಿ ಪಡೆದು, ಬರುವ ಮಾರ್ಚ್ 30 ರಂದು ಘಟಪ್ರಭಾ ನದಿಗೆ ನೀರನ್ನು ಹರಿಸಲಾಗುವುದು. ಇದು ನದಿ ತೀರದ ಗ್ರಾಮಗಳ ಕುಡಿಯುವ ನೀರಿನ ಸಮಸ್ಯೆಯನ್ನು ದೊಡ್ಡ ಮಟ್ಟದಲ್ಲಿ ಪರಿಹರಿಸಲಿದೆ.
ನದಿಯ ಜೊತೆಗೆ ಏಪ್ರಿಲ್ 7 ರಂದು ಎಡದಂಡೆ ಮತ್ತು ಬಲದಂಡೆ ಕಾಲುವೆಗಳಿಗೂ ನೀರು ಬಿಡಲು ಸಚಿವರು ದಿನಾಂಕ ನಿಗದಿಪಡಿಸಿದ್ದಾರೆ. ಆರು ತಿಂಗಳ ಮೊದಲೇ ಯೋಜಿತವಾಗಿ ಸಂಗ್ರಹಿಸಿಟ್ಟಿದ್ದ ಈ ನೀರನ್ನು ಸಂಪೂರ್ಣವಾಗಿ ರೈತರ ಮತ್ತು ಸಾರ್ವಜನಿಕರ ಹಿತದೃಷ್ಟಿಯಿಂದಲೇ ಬಳಸಲಾಗುತ್ತಿದೆ. ಇದೇ ವೇಳೆ ಸಚಿವರು, ಬೇಸಿಗೆಯ ಗಂಭೀರತೆಯನ್ನು ಅರಿತು ರೈತರು ಮತ್ತು ಸಾರ್ವಜನಿಕರು ಲಭ್ಯವಿರುವ ಕುಡಿಯುವ ನೀರನ್ನು ಅತ್ಯಂತ ಮಿತವಾಗಿ ಬಳಸಬೇಕೆಂದು ಮನವಿ ಮಾಡಿದ್ದಾರೆ.
