Kagawad

ಕೃಷ್ಣಾ ನದಿಗೆ 500 ಕ್ಯೂಸೆಕ್ ನೀರು ಬಿಡುಗಡೆ: ಕಾಗವಾಡ ಭಾಗದ ರೈತರಲ್ಲಿ ಹರ್ಷ

Share

ಮಹಾರಾಷ್ಟ್ರ ರಾಜ್ಯದ ಕೊಯಿನಾ ಅಣೆಕಟ್ಟಿನಿಂದ ಕೃಷ್ಣಾ ನದಿಗೆ 500 ಕ್ಯೂಸೆಕ್ ನೀರು ಹರಿಸಲಾಗುತ್ತಿದ್ದು, ಇದರಿಂದ ಈ ಭಾಗದ ರೈತರಲ್ಲಿ ಸಂತಸ ವ್ಯಕ್ತವಾಗುತ್ತಿದೆ.
ಕೆಲ ದಿನಗಳ ಹಿಂದೆ ಹಿಪ್ಪರಗಿ ಅಣೆಕಟ್ಟಿನಿಂದ ಸೋರಿಕೆಯ ಮುಖಾಂತರ ಸುಮಾರು ಮೂರು ಟಿಎಂಸಿ ನೀರು ಹರಿದು ಹೋಗಿತ್ತು. ಇದರಿಂದ ಮುಂಬರುವ ಬೇಸಿಗೆ ಅವಧಿಯಲ್ಲಿ ನೀರಿನ ಕೊರತೆ ತೀವ್ರಗೊಳ್ಳಬಹುದು ಎಂಬ ಆತಂಕ ಎದುರಾಗಿತ್ತು. ಈ ಗಂಭೀರ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಕಾಗವಾಡ ಕ್ಷೇತ್ರದ ಶಾಸಕರಾದ ರಾಜು ಕಾಗೆ ಅವರು, ರಾಜ್ಯದ ಮುಖ್ಯಮಂತ್ರಿಗಳ ಮುಖಾಂತರ ಮಹಾರಾಷ್ಟ್ರ ರಾಜ್ಯದ ನೀರಾವರಿ ಇಲಾಖೆಗೆ ಮಾಹಿತಿ ನೀಡಿ, ನದಿಗೆ ನೀರು ಬಿಡುವಂತೆ ಮನವಿ ಮಾಡಿದ್ದರು.

ಶಾಸಕರ ಮನವಿಗೆ ಸ್ಪಂದಿಸಿದ ಮಹಾರಾಷ್ಟ್ರ ಸರ್ಕಾರವು ಇದೀಗ ನದಿಗೆ ನೀರು ಹರಿಸಿದೆ. ರಾಜಾಪುರ ಅಣೆಕಟ್ಟಿನಿಂದ ಹರಿದು ಬರುತ್ತಿರುವ ನೀರು ಕಾಗವಾಡ ತಾಲೂಕಿನ ಗ್ರಾಮಗಳ ಮೂಲಕ ಸಾಗುತ್ತಿದೆ. ಬೇಸಿಗೆ ಕಾಲದಲ್ಲಿ ಕೃಷ್ಣಾ ನದಿ ಬತ್ತಿ ಹೋಗುವ ಸಾಧ್ಯತೆ ಇತ್ತು, ಆದರೆ ಶಾಸಕ ರಾಜು ಕಾಗೆ ಅವರ ಪ್ರಯತ್ನದಿಂದಾಗಿ ನೀರು ಹರಿದು ಬರುತ್ತಿರುವುದು ಜನರಲ್ಲಿ ನೆಮ್ಮದಿ ಮೂಡಿಸಿದೆ.
ಕೃಷ್ಣಾ ನದಿಯು ಉಗಾರ್, ಐನಾಪುರ ಮತ್ತು ಅಥಣಿ ಭಾಗದ ಮೂಲಕ ಹರಿಯಲು ಪ್ರಾರಂಭಿಸಿದೆ. ಏಪ್ರಿಲ್ ಮತ್ತು ಮೇ ತಿಂಗಳ ಕಡು ಬೇಸಿಗೆಯಲ್ಲಿ ಎದುರಾಗಬಹುದಾದ ನೀರಿನ ಸಮಸ್ಯೆ ಈ ನೀರಿನಿಂದ ಬಗೆಹರಿಯಬಹುದು ಎಂಬ ಆಶಯವನ್ನು ರೈತರು ಹಾಗೂ ಸಾಮಾಜಿಕ ಕಾರ್ಯಕರ್ತರು ವ್ಯಕ್ತಪಡಿಸಿದ್ದಾರೆ.

ಕೊಯಿನಾ ಅಣೆಕಟ್ಟಿನಿಂದ ನೀರು ಬಿಡುಗಡೆಯಾಗಿರುವುದರಿಂದ ಮಂಗಾವತಿ, ಶೇಡಬಾಳ, ಜುಗುಳ, ಕುಸುನಾಳ, ಮೋಳೆವಾಡ, ಐನಾಪುರ, ಕೃಷ್ಣಾಕಿತ್ತೂರ ಗ್ರಾಮಗಳ ರೈತರು ಶಾಸಕರ ಪ್ರಯತ್ನವನ್ನು ಶ್ಲಾಘಿಸಿದ್ದಾರೆ. ಈ ಕುರಿತು ಹಿಪ್ಪರಗಿ ಅಣೆಕಟ್ಟಿನ ಅಧಿಕಾರಿಗಳನ್ನು ಸಂಪರ್ಕಿಸಿದಾಗ, ಸದ್ಯ ಕೃಷ್ಣಾ ನದಿಯಲ್ಲಿ 500 ಕ್ಯೂಸೆಕ್ ನೀರು ಹರಿದು ಬರುತ್ತಿದೆ ಎಂದು ಖಚಿತಪಡಿಸಿದ್ದಾರೆ.
ಒಟ್ಟಾರೆಯಾಗಿ, ಬೇಸಿಗೆಯ ಆರಂಭದಲ್ಲೇ ಸಕಾಲಕ್ಕೆ ಕೃಷ್ಣಾ ನದಿಗೆ ನೀರು ಹರಿದು ಬಂದಿರುವುದು ಈ ಭಾಗದ ಕೃಷಿಕರು ಮತ್ತು ಸಾರ್ವಜನಿಕರ ಮುಖದಲ್ಲಿ ಮಂದಹಾಸ ಮೂಡಿಸಿದೆ.

Tags:

error: Content is protected !!