Athani

ಸಣ್ಣ ವಿಷಯಗಳ ಚರ್ಚೆ ಬಿಟ್ಟು ದೇಶದ ಹಿತ ಗಮನಿಸಿ: ಐಪಿಎಲ್ ಟಿಕೆಟ್ ಗದ್ದಲಕ್ಕೆ ಲಕ್ಷ್ಮಣ ಸವದಿ ಕಿಡಿ!

Share

ಸದನದಲ್ಲಿ ಗಂಭೀರ ವಿಷಯಗಳ ಬದಲು ಐಪಿಎಲ್ ಟಿಕೆಟ್‌ನಂತಹ ಸಣ್ಣ ವಿಚಾರಗಳ ಚರ್ಚೆ ಅನವಶ್ಯಕ ಎಂದು ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಆಕ್ರೋಶ ಹೊರಹಾಕಿದ್ದಾರೆ. ಅಥಣಿಯ ಜಂಬಗಿಯಲ್ಲಿ ಮಾತನಾಡಿದ ಅವರು, ಅಂತರಾಷ್ಟ್ರೀಯ ಮಟ್ಟದ ಯುದ್ಧ ಭೀತಿ ಮತ್ತು ಸ್ಥಳೀಯ ಅಭಿವೃದ್ಧಿ ಬಗ್ಗೆ ಮಹತ್ವದ ಹೇಳಿಕೆ ನೀಡಿದ್ದಾರೆ.

ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧದ ಪರಿಣಾಮವಾಗಿ ಜಗತ್ತಿನಾದ್ಯಂತ ಇಂಧನ ಮತ್ತು ಗ್ಯಾಸ್ ಕೊರತೆ ಎದುರಾಗುತ್ತಿದೆ. ಇಂತಹ ಗಂಭೀರ ಪರಿಸ್ಥಿತಿಯಲ್ಲಿ ಶಾಸಕರು ಸದನದಲ್ಲಿ ಐಪಿಎಲ್ ಟಿಕೆಟ್‌ಗಾಗಿ ಕಿತ್ತಾಡುವುದು ಸರಿಯಲ್ಲ ಎಂದು ಸವದಿ ಬೇಸರ ವ್ಯಕ್ತಪಡಿಸಿದರು. ಇದೇ ವೇಳೆ ಶಾಸಕ ರಾಜು ಕಾಗೆ ಮತ್ತು ತಮ್ಮ ನಡುವಿನ ಸ್ನೇಹದಲ್ಲಿ ಬಿರುಕು ಮೂಡಿದೆ ಎಂಬ ವದಂತಿಗಳನ್ನು ತಳ್ಳಿಹಾಕಿದ ಅವರು, “ನಮ್ಮದು 20 ವರ್ಷಗಳ ಗಟ್ಟಿ ಸಂಬಂಧ, ಕಾಗೆ ಅವರ ಆರೋಗ್ಯ ಸರಿ ಇಲ್ಲದ ಕಾರಣ ಕಾರ್ಯಕ್ರಮಕ್ಕೆ ಬಂದಿಲ್ಲ ಅಷ್ಟೇ” ಎಂದು ಸ್ಪಷ್ಟನೆ ನೀಡಿದರು.

ರಾಜ್ಯದ ಉಪಚುನಾವಣೆಗಳ ಕುರಿತು ಮಾತನಾಡಿದ ಅವರು, ದಾವಣಗೆರೆ ಮತ್ತು ಬಾಗಲಕೋಟೆ ಎರಡೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಗೆಲುವು ನಿಶ್ಚಿತ ಎಂದರು. ಸೋಮವಾರದಿಂದ ತಾವೂ ಕೂಡ ಪ್ರಚಾರ ಕಣಕ್ಕಿಳಿಯುತ್ತಿರುವುದಾಗಿ ತಿಳಿಸಿದ ಸವದಿ, ಜನರ ಬೆಂಬಲ ಹಸ್ತದ ಪರವಾಗಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಇನ್ನು ಅಥಣಿ-ಖಿಳೆಗಾಂವಿ ರಾಜ್ಯ ಹೆದ್ದಾರಿ ಅಭಿವೃದ್ಧಿಗೆ 3 ಕೋಟಿ ರೂ. ಅನುದಾನ ಬಿಡುಗಡೆಯಾಗಿದ್ದು, ಟೆಂಡರ್ ಪ್ರಕ್ರಿಯೆ ಮುಗಿದು ಶೀಘ್ರವೇ ಕಾಮಗಾರಿ ಆರಂಭವಾಗಲಿದೆ ಎಂಬ ಸಿಹಿ ಸುದ್ದಿಯನ್ನು ನೀಡಿದರು.

Tags:

error: Content is protected !!