BELAGAVI

ಇರಾನ್-ಇಸ್ರೇಲ್ ವಾರ್ ಎಫೆಕ್ಟ್: ಬೆಳಗಾವಿ ರೈತರಿಗೆ ಇಲ್ಲ ಗ್ಯಾಸ್ ಟೆನ್ಷನ್

Share

ಜಾಗತಿಕ ಮಟ್ಟದಲ್ಲಿ ಇರಾನ್ ಮತ್ತು ಇಸ್ರೇಲ್ ನಡುವಿನ ಯುದ್ಧದ ಕಾರ್ಮೋಡ ಕವಿದಿದೆ. ಇದರ ನೇರ ಪರಿಣಾಮ ಅಡುಗೆ ಅನಿಲದ ಮೇಲೆ ಬೀರಲಿದ್ದು, ದೇಶಾದ್ಯಂತ ಗ್ಯಾಸ್‌ಗಾಗಿ ಪರದಾಟ ಶುರುವಾಗುವ ಭೀತಿ ಇದೆ. ಆದರೆ, ಗಡಿ ಜಿಲ್ಲೆ ಬೆಳಗಾವಿಯ ರೈತರಿಗೆ ಮಾತ್ರ ಈ ಬಗ್ಗೆ ಕಿಂಚಿತ್ತೂ ಆತಂಕವಿಲ್ಲ. ಯಾಕಂದ್ರೆ ಅವರು ಈಗ ‘ಗೋಬರ್ ಗ್ಯಾಸ್’ ಮಂತ್ರ ಜಪಿಸುತ್ತಿದ್ದಾರೆ. ಆ ಕುರಿತ ಒಂದು ವಿಶೇಷ ವರದಿ ಇಲ್ಲಿದೆ ನೋಡಿ..

ಇರಾನ್-ಇಸ್ರೇಲ್ ಯುದ್ಧದ ಎಫೆಕ್ಟ್‌ನಿಂದಾಗಿ ಇಂಧನ ಮತ್ತು ಅಡುಗೆ ಅನಿಲದ ಬೆಲೆ ಏರಿಕೆ ಹಾಗೂ ಕೊರತೆಯ ಆತಂಕ ದೇಶವನ್ನು ಕಾಡುತ್ತಿದೆ. ಆದರೆ ಬೆಳಗಾವಿ ತಾಲೂಕಿನ ಕಡೋಲಿ ಸೇರಿದಂತೆ ಸುತ್ತಮುತ್ತಲಿನ ಹತ್ತಾರು ಗ್ರಾಮಗಳ ರೈತರು ಮಾತ್ರ ಈ ಸಂಕಷ್ಟಕ್ಕೆ ಸವಾಲು ಹಾಕಿದ್ದಾರೆ. ಹೈನುಗಾರಿಕೆಯನ್ನೇ ನಂಬಿಕೊಂಡಿರುವ ಇಲ್ಲಿನ ರೈತರು, ಪರಿಸರವಾದಿ ಶಿವಾಜಿರಾವ್ ಕಾಗಣಿಕರ ಅವರ ಜನಜಾಗೃತಿಯಿಂದಾಗಿ ಸುಮಾರು 30 ವರ್ಷಗಳ ಹಿಂದೆಯೇ ಗೋಬರ್ ಗ್ಯಾಸ್ ಅಳವಡಿಸಿಕೊಂಡಿದ್ದರು. ಮಧ್ಯದಲ್ಲಿ ಆಧುನಿಕತೆಯ ವ್ಯಾಮೋಹಕ್ಕೆ ಬಿದ್ದು ಎಲ್.ಪಿ.ಜಿ ಸಿಲಿಂಡರ್ ಮೊರೆ ಹೋಗಿದ್ದ ರೈತರು, ಈಗ ಸಿಲಿಂಡರ್ ಬೆಲೆ ಏರಿಕೆ ಮತ್ತು ಕೊರತೆಯಿಂದ ಬೇಸತ್ತು ಮತ್ತೆ ತಮ್ಮ ಹಳೆಯ ಗೋಬರ್ ಗ್ಯಾಸ್ ಪದ್ಧತಿಯತ್ತ ವಾಲುತ್ತಿದ್ದಾರೆ.

ಕಳೆದ 30 ವರ್ಷಗಳಿಂದ ಗೋಬರ್ ಗ್ಯಾಸ್’ನ್ನೇ ಅಡುಗೆಗಾಗಿ ಉಪಯೋಗಿಸುತ್ತಿದ್ದೇವು. ನಂತರ ಎಲ್.ಪಿ.ಜಿ ಬಳಕೆಯಿಂದ ಅದು ನಿಂತು ಹೋಗಿತ್ತು. ಈಗ ಎಲ್.ಪಿ.ಜಿ ಕೊರತೆ ಹಿನ್ನೆಲೆ ಗೋಬರ್ ಗ್ಯಾಸ್’ನ್ನು ದುರಸ್ಥಿ ಮಾಡಿಕೊಂಡಿದ್ದು, ಅದನ್ನೇ ಮತ್ತೇ ಬಳಸುತ್ತಿದ್ದೇವೆ. ಒಂದು ಬುಟ್ಟಿ ಸಗಣಿಯನ್ನು ಹಾಕಿದರೇ, ಸಾಕು ಗೋಬರ್ ಗ್ಯಾಸ್ ನಿರ್ವಹಿಸುತ್ತದೆ. ಇದರಿಂದ ಹಣ ಕೂಡ ಉಳಿತಾಯವಾಗುತ್ತದೆ. ಗೋಬರ್ ಗ್ಯಾಸ್ ಇದ್ದವರೂ ಅದನ್ನು ಉಪಯೋಗಿಸಿದರೇ, ಎಲ್.ಪಿ.ಜಿ ಮೇಲಿನ ಅವಲಂಬನೆ ಕಡಿಮೆಯಾಗುತ್ತದೆ ಎಂದು ಶಾಂತಾ ಚೌಗುಲೆ ಹೇಳಿದರು.

ಮೊದಲೂ ಕಟ್ಟಿಗೆ ಬಳಸಿ ಒಲೆಯನ್ನು ಬಳಸಲಾಗುತ್ತಿತ್ತು. ಆನಂತರ ಗೋಬರ್ ಗ್ಯಾಸ್ ಆರಂಭಿಸಲಾಯಿತು. ನಂತರ ಎಮ್ಮೆ ಕೋಣಗಳ ಸಾಕಾಣಿಕೆ ಕಡಿಮೆಯಾದಾಗ ಎಲ್.ಪಿ.ಜಿ ಮೊರೆ ಹೋದರು. ಆದರೇ, ಈಗ ಎಲ್.ಪಿ.ಜಿ ಕೊರತೆ ಹಿನ್ನೆಲೆ ಮತ್ತೇ, ಜನರು ಗೋಬರ್ ಗ್ಯಾಸ್ ಕಡೆ ಮುಖ ಮಾಡಿದ್ದಾರೆ. ಪರಿಸರ ಸ್ನೇಹಿಯಾದ ಗೋಬರ್ ಗ್ಯಾಸ್’ನ್ನು ಮತ್ತೇ ರೈತರು ಬಳಸುತ್ತಿದ್ದಾರೆಂದು ಅಪ್ಪಾಸಾಹೇಬ್ ದೇಸಾಯಿ ಹೇಳಿದರು.

ಸಿಲಿಂಡರ್ ಬುಕಿಂಗ್ ಮಾಡುವ ಕಿರಿಕಿರಿೂ ಇಲ್ಲದ ಈ ‘ಪರಿಸರ ಸ್ನೇಹಿ’ ಇಂಧನ ವ್ಯವಸ್ಥೆ ಈಗ ಇಡೀ ಜಿಲ್ಲೆಗೆ ಮಾದರಿಯಾಗಿದೆ. ಆಧುನಿಕ ಸೌಲಭ್ಯಗಳ ನಡುವೆಯೂ ಸ್ವಾವಲಂಬಿ ಬದುಕು ಹೇಗೆ ಸಾಧ್ಯ ಎಂಬುದನ್ನು ಕಡೋಲಿ ಭಾಗದ ರೈತರು ಇಡೀ ದೇಶಕ್ಕೆ ತೋರಿಸಿಕೊಟ್ಟಿದ್ದಾರೆ.

Tags:

error: Content is protected !!