Nandagad

ಇನ್ ನ್ಯೂಸ್ ಅಸಲಿ ಪವರ್: ಕತ್ತಲಲ್ಲಿದ್ದ ರಾಯಣ್ಣನ ಮೂರ್ತಿಗೆ ಈಗ ಸೌರಪ್ರಕಾಶ; ಕೆರೆ ಅಂಗಳದಲ್ಲಿ ಮಿನುಗಿದ ಕ್ರಾಂತಿವೀರ

Share

ನಂದಗಡದ ಕೆರೆಯಲ್ಲಿ ಕತ್ತಲಲ್ಲಿ ಕವಿದಿದ್ದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಮೂರ್ತಿಯ ಬಗ್ಗೆ ನಾವು ಪ್ರಸಾರ ಮಾಡಿದ್ದ ವರದಿ ಈಗ ದೊಡ್ಡ ಮಟ್ಟದ ಬದಲಾವಣೆ ತಂದಿದೆ. ನಮ್ಮ ಸುದ್ದಿಯ ಬಿಗ್ ಇಂಪ್ಯಾಕ್ಟ್ ಹೇಗಿದೆ ನೋಡಿ..

ಐತಿಹಾಸಿಕ ನಂದಗಡ ಗ್ರಾಮದ ಕೆರೆಯಲ್ಲಿ ಸ್ಥಾಪಿಸಲಾಗಿರುವ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಭವ್ಯ ಮೂರ್ತಿಯು ಮುಖ್ಯಮಂತ್ರಿಗಳ ಉದ್ಘಾಟನೆಯ ನಂತರ ಕೇವಲ ಒಂದೇ ದಿನಕ್ಕೆ ಕತ್ತಲಲ್ಲಿ ಕಳೆದುಹೋಗಿತ್ತು. ಈ ಬಗ್ಗೆ ‘ಕತ್ತಲಲ್ಲಿ ಕ್ರಾಂತಿವೀರ-ಪ್ರಾಧಿಕಾರದ ನಿರ್ಲಕ್ಷ್ಯ’ ಎಂಬ ಶೀರ್ಷಿಕೆಯಡಿ ಇನ್ ನ್ಯೂಸ್ ಸರಣಿ ವರದಿಗಳನ್ನು ಪ್ರಸಾರ ಮಾಡಿತ್ತು. ಲೋಕಾರ್ಪಣೆಯಾದ ಬೆನ್ನಲ್ಲೇ ರಾಯಣ್ಣನಿಗೆ ಆಗುತ್ತಿರುವ ಈ ಅವಮಾನದ ವಿರುದ್ಧ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಇಲಾಖೆಯ ದಿವ್ಯ ನಿರ್ಲಕ್ಷ್ಯವನ್ನು ಎತ್ತಿ ತೋರಿಸುವ ಮೂಲಕ ನಮ್ಮ ವಾಹಿನಿಯು ಸಂಬಂಧಪಟ್ಟ ಅಧಿಕಾರಿಗಳಿಗೆ ಚಾಟಿ ಬೀಸುವ ಕೆಲಸ ಮಾಡಿತ್ತು.

ನಮ್ಮ ಸುದ್ದಿಯ ತೀವ್ರತೆಗೆ ಎಚ್ಚೆತ್ತುಕೊಂಡ ಸಂಬಂಧಪಟ್ಟ ಇಲಾಖೆ ಹಾಗೂ ಪ್ರಾಧಿಕಾರವು ಈಗ ಕೆರೆಯ ಆವರಣದಲ್ಲಿ ಯುದ್ಧೋಪಾದಿಯಲ್ಲಿ ಸೋಲಾರ್ ವಿದ್ಯುತ್ ಸ್ಥಂಭಗಳನ್ನು ಅಳವಡಿಸಿದೆ. ಇದರ ಪರಿಣಾಮವಾಗಿ, ಇಷ್ಟು ದಿನಗಳ ಕಾಲ ಕತ್ತಲಲ್ಲಿ ಅಸ್ಪಷ್ಟವಾಗಿ ಕಾಣುತ್ತಿದ್ದ ರಾಯಣ್ಣನ ಮೂರ್ತಿ ಈಗ ರಾತ್ರಿಯಿಡೀ ಬೆಳಕಿನಿಂದ ಪ್ರಜ್ವಲಿಸುತ್ತಿದೆ. “ಇನ್ ನ್ಯೂಸ್” ಸಾಮಾಜಿಕ ಕಳಕಳಿಗೆ ಮತ್ತು ತುರ್ತು ಸ್ಪಂದನೆಗೆ ಸಾರ್ವಜನಿಕರಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದ್ದು, ಇದು ಜನಸಾಮಾನ್ಯರ ಧ್ವನಿಯಾಗಿ ನಮ್ಮ ವಾಹಿನಿ ಸಾಧಿಸಿದ ಮತ್ತೊಂದು “ಬಿಗ್ ಇಂಪ್ಯಾಕ್ಟ್” ಆಗಿದೆ.

Tags:

error: Content is protected !!