ಬಾಗಲಕೋಟೆಯ ನವನಗರದಲ್ಲಿ ಇಂದು ಸಂಜೆ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ರೋಗಿಯನ್ನು ಹೊತ್ತೊಯ್ಯುತ್ತಿದ್ದ ಆ್ಯಂಬುಲೆನ್ಸ್ ಹಾಗೂ ಇನ್ನೋವಾ ಕಾರು ಮುಖಾಮುಖಿ ಡಿಕ್ಕಿಯಾಗಿದ್ದು, ಘಟನೆಯ ದೃಶ್ಯಗಳು ಎದೆಝಲ್ಲೆನಿಸುವಂತಿವೆ.

ಬಾಗಲಕೋಟೆ ನವನಗರದ ಕೆಎಸ್ಆರ್ಟಿಸಿ ಸರ್ಕಲ್ ಬಳಿ ವೇಗವಾಗಿ ಬಂದ ಇನ್ನೋವಾ ಕಾರು ಹಾಗೂ ಆ್ಯಂಬುಲೆನ್ಸ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ. ಡಿಕ್ಕಿಯ ರಭಸಕ್ಕೆ ರೋಗಿ ಇದ್ದ ಆ್ಯಂಬುಲೆನ್ಸ್ ರಸ್ತೆಯಲ್ಲೇ ಉರುಳಿ ಬಿದ್ದಿದೆ. ಅಪಘಾತ ಸಂಭವಿಸುತ್ತಿದ್ದಂತೆ ಎಚ್ಚೆತ್ತ ಸ್ಥಳೀಯ ಸಾರ್ವಜನಿಕರು ತಕ್ಷಣವೇ ಸ್ಥಳಕ್ಕೆ ಧಾವಿಸಿ, ಆ್ಯಂಬುಲೆನ್ಸ್ನಲ್ಲಿದ್ದವರನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಅದೃಷ್ಟವಶಾತ್ ಈ ಭೀಕರ ಘಟನೆಯಲ್ಲಿ ಆ್ಯಂಬುಲೆನ್ಸ್ನಲ್ಲಿದ್ದ ರೋಗಿ ಹಾಗೂ ಸಿಬ್ಬಂದಿಗೆ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಸಣ್ಣಪುಟ್ಟ ಗಾಯಗಳೊಂದಿಗೆ ಎಲ್ಲರೂ ಪಾರಾಗಿದ್ದು, ಸ್ಥಳೀಯರ ಸಮಯಪ್ರಜ್ಞೆಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಸಂಚಾರ ದಟ್ಟಣೆಯನ್ನು ಸುಗಮಗೊಳಿಸಿದ್ದಾರೆ.
